ಮಂಗಳೂರು: ಕೆಥೋಲಿಕ್ ಕ್ರೈಸ್ತರ ಪವಿತ್ರ ಹಬ್ಬಗಳಲ್ಲೊಂದಾದ ಮೇರಿ ಮಾತೆಯ ಜನನದ ಹಬ್ಬ ‘ಮೊಂತಿ ಫೆಸ್ತ್’ (Monti Fest) ಆಚರಣೆಗೆ ಕರಾವಳಿಯಲ್ಲಿ ಸಡಗರದ ಚಾಲನೆ ಸಿಕ್ಕಿದೆ. ಹಬ್ಬದ ಪೂರ್ವಭಾವಿಯಾಗಿ ನಡೆಯುವ ಒಂಬತ್ತು ದಿನಗಳ ವಿಶೇಷ ‘ನೊವೆನಾ ಪ್ರಾರ್ಥನೆ’ ಭಾನುವಾರದಿಂದ ಜಿಲ್ಲೆಯಾದ್ಯಂತ ಭಕ್ತಿ-ಶ್ರದ್ಧೆಯಿಂದ ಆರಂಭಗೊಂಡಿದೆ.

ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಹೂಗಳ ಸಮರ್ಪಣೆ
ಹಬ್ಬದ ಸಿದ್ಧತೆಯ ಮೊದಲ ದಿನವಾದ ಭಾನುವಾರ ಬೆಳಗ್ಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ನೊವೆನಾ ಪ್ರಾರ್ಥನೆಯ ಬಳಿಕ ಭಕ್ತರು ಅತ್ಯಂತ ಸಡಗರದಿಂದ ಮೇರಿ ಮಾತೆಯ ಮೂರ್ತಿಗೆ ಹೂಗಳನ್ನು ಅರ್ಪಿಸಿ ವಂದಿಸಿದರು. ಇಂದಿನಿಂದ ಸತತ 9 ದಿನಗಳ ಕಾಲ ಪ್ರತೀ ಚರ್ಚ್‌ಗಳಲ್ಲೂ ಈ ವಿಶೇಷ ಪ್ರಾರ್ಥನೆ ಹಾಗೂ ಹೂ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ.

ಮಕ್ಕಳಲ್ಲಿ ಸಡಗರ, ಸಿಹಿತಿಂಡಿ ವಿತರಣೆ
ಮೇರಿ ಮಾತೆಗೆ ಹೂ ಅರ್ಪಿಸುವ ಈ ಧಾರ್ಮಿಕ ಆಚರಣೆಯಲ್ಲಿ ಬಾಲಕ-ಬಾಲಕಿಯರು, ಮಹಿಳೆಯರು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಪ್ರತಿದಿನ ತಪ್ಪದೇ ಬಂದು ಹೂ ಅರ್ಪಿಸುವ ಪುಟಾಣಿ ಮಕ್ಕಳಿಗೆ ಚರ್ಚ್ ಸಮಿತಿಯ ವತಿಯಿಂದ ಸಿಹಿತಿಂಡಿ (Sweets) ವಿತರಿಸಿ ಪ್ರೋತ್ಸಾಹಿಸಲಾಗುತ್ತಿದೆ.

ಮನೆ-ಮನೆಗಳಲ್ಲೂ ನೊವೆನಾ ಪ್ರಾರ್ಥನೆಕೋವಿಡ್ ನಂತರದ ದಿನಗಳಲ್ಲಿ ಬದಲಾದ ಶೈಲಿ ಹಾಗೂ ವೈಯಕ್ತಿಕ ಭಕ್ತಿಯ ಕಾರಣದಿಂದಾಗಿ, ಹಲವರು ತಮ್ಮ ಮನೆಗಳಲ್ಲೇ ಮಾತೆಯ ಮೂರ್ತಿಯನ್ನಿಟ್ಟು ಹೂ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಮೇರಿ ಮಾತೆಯ ಗ್ರೊಟ್ಟೊ (Grotto) ಮುಂಭಾಗದಲ್ಲಿ ಭಕ್ತರು ಒಟ್ಟಾಗಿ ಸೇರಿ ನೊವೆನಾ ನೆರವೇರಿಸುತ್ತಿದ್ದಾರೆ. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಕೆಥೋಲಿಕ್ ಕ್ರೈಸ್ತರು ಈ ಸಂಪ್ರದಾಯವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಬಿಷಪ್ ಹೌಸ್‌ನಲ್ಲಿ ಪ್ರಾರ್ಥನೆಗೆ ಚಾಲನೆಮಂಗಳೂರು ಧರ್ಮ ಕೇಂದ್ರದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಬಿಷಪ್ ಹೌಸ್‌ನಲ್ಲಿ ವಿಶೇಷ ಬಲಿಪೂಜೆ ನೆರವೇರಿಸಿ, ನೊವೆನಾ ಪ್ರಾರ್ಥನೆಗೆ ಅಧಿಕೃತ ಚಾಲನೆ ನೀಡಿದರು. ಸೆಪ್ಟೆಂಬರ್ 8 ರಂದು ಮೇರಿ ಮಾತೆಯ ಜನನ ಹಬ್ಬದ (ಮೊಂತಿ ಫೆಸ್ತ್) ಭವ್ಯ ಆಚರಣೆಯೊಂದಿಗೆ ಈ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗಳು ಸಂಪನ್ನಗೊಳ್ಳಲಿವೆ.

ಪೆರುವಾಯಿ: ಮೋಂತಿ ಫೆಸ್ತ್ ನ ಪೂರ್ವ ತಯಾರಿಯಾಗಿ ನಡೆಯುವ ನೊವೆನಾ ಪ್ರಾರ್ಥನೆ ರವಿವಾರ ಆರಂಭಗೊಂಡಿದ್ದು, ಫಾತಿಮಾ ಮಾತೆಯ ದೇವಾಲಯ ಪೆರುವಾಯಿಯಲ್ಲಿ ಭಕ್ತಿಯಿಂದ ನೆರವೇರಿತು.
ಧರ್ಮಗುರು ವಂ. ಸೈಮನ್ ಡಿಸೋಜಾ ನೊವೆನಾ ಪ್ರಾರ್ಥನೆ ನೆರವೇರಿಸಿದರು. ಬ್ರದರ್ ಪ್ರೀತೇಶ್ ಪಿಂಟೊ, ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಸಹಿತ ನೂರಾರು ಮಂದಿ ಇದ್ದರು. ಮಕ್ಕಳು ಮಾತೆಗೆ ಹೂಗಳನ್ನು ಅರ್ಪಿಸಿದರು.


