ಮಂಗಳೂರು: ಕುಂಬಾರ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಸಮಾಜದ ಪ್ರಗತಿಗಾಗಿ ಲಭ್ಯವಿರುವ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳನ್ನು ತಳಮಟ್ಟದ ಜನರಿಗೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸ ಲಾಗುವುದು ಎಂದು ರಾಜ್ಯ ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಶ್ರೀನಿವಾಸ್ ವೇಲು ಅವರು ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಶನಿವಾರ ಭೇಟಿ ನೀಡಿದ ಅವರು, ಕುಂಬಾರ ಸಮಾಜದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಹವಾಲುಗಳನ್ನು ಸ್ವೀಕರಿಸಿ ಬಳಿಕ ಮಾತನಾಡುತ್ತಿದ್ದರು.

ಕುಂಬಾರ ಸಮಾಜವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಪ್ರಮುಖ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಹರಿಸಲು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಸಮಾಜದ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಅವಕಾಶಗಳು ಮತ್ತು ಪ್ರಾತಿನಿಧ್ಯ ದೊರೆಯಲಿದೆ. ಸಮಾಜದ ಒಟ್ಟಾರೆ ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ಸದಾಶಿವ ಬಂಗೇರ ಬಂಟ್ವಾಳ, ಸುಧಾಕರ್ ಕುಲಾಲ್, ಮಹೇಶ್ ಕೋಡಿಕಲ್, ಶ್ರೀನಿವಾಸ್ ಬೊಂದೇಲ್, ಸದಾನಂದ, ಸದಾಶಿವ ಕುಲಾಲ್ ಪಾಂಡೇಶ್ವರ, ಜಯಶೀಲ ಅಡ್ಯಂತಾಯ, ಚಂದ್ರಕಲಾ ಜೋಗಿ, ನ್ಯಾನ್ಸಿ ನೊರೊನ್ಹ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ತೇಜಸ್ವಿ ರಾಜ್ ಅವರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
