ಮಂಗಳೂರು: ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ, ಸಾಲದ ಬಾಧೆ ಹಾಗೂ ಬೆಳೆ ನಷ್ಟದಿಂದ ರೈತರು ಸತತವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೂ, ಸಂಕಷ್ಟದಲ್ಲಿರುವ ಅನ್ನದಾತರಿಗೆ ಪರಿಹಾರ ವಿತರಿಸುವಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ಹಾಗೂ ವಂಚನೆ ಎಸಗುತ್ತಿದೆ ಎಂದು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ರಾಜ್ಯದ ರೈತರ ಆತ್ಮಹತ್ಯೆ ಹಾಗೂ ಪರಿಹಾರ ವಿತರಣೆಯ ಕುರಿತು ಕೇಳಿದ ಪ್ರಶ್ನೆಗೆ ಕೃಷಿ ಸಚಿವರು ಲಿಖಿತ ಉತ್ತರ ಒದಗಿಸಿದ್ದಾರೆ. ಈ ಉತ್ತರವು ಸರ್ಕಾರದ ಅಪ್ಪಟ ರೈತ ವಿರೋಧಿ ನೀತಿಯನ್ನು ಬಟಾಬಯಲು ಮಾಡಿದೆ.
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 1254, 2024-25ನೇ ಸಾಲಿನಲ್ಲಿ 1213 ಹಾಗೂ 2025-26ನೇ ಸಾಲಿನಲ್ಲಿ 1081 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಅಂದರೆ ಮೂರ್ನಾಲ್ಕು ವರ್ಷಗಳಲ್ಲಿ 3500ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸರ್ಕಾರ ಇವರ ಬಗ್ಗೆ ಎಷ್ಟೊಂದು ನಿರ್ಲಕ್ಷ್ಯ ವಹಿಸಿದೆ ಎಂದರೆ, ಈ ಕೆಳಗಿನ ಅಂಶಗಳೇ ಅದಕ್ಕೆ ಸಾಕ್ಷಿಯಾಗಿವೆ:
೧. 11 ವರ್ಷದ ಹಳೆಯ ಪರಿಹಾರ, ದಾಖಲೆಗಳಲ್ಲಿ ‘ಮಾಯವಾದ’ ಅನುಬಂಧ:
ಸರ್ಕಾರದ ಆದೇಶ ದಿನಾಂಕ 11.11.2015 ರಂತೆ ಕೃಷಿ ಸಾಲದ ಹೊರೆಯಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ಕೇವಲ 5.00 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಇದು ಸುಮಾರು 11 ವರ್ಷಗಳ ಹಿಂದಿನ ಆದೇಶ! ಇಂದಿನ ಕೃಷಿ ವೆಚ್ಚ, ಜೀವನ ನಿರ್ವಹಣೆ ಗಗನಕ್ಕೇರಿರುವಾಗ ಈ ಮೊತ್ತವನ್ನು ಹೆಚ್ಚಿಸುವ ಸೌಜನ್ಯವೂ ಸರ್ಕಾರಕ್ಕಿಲ್ಲ. ಅದಕ್ಕಿಂತ ನಾಚಿಕೆಗೇಡಿನ ಸಂಗತಿಯೆಂದರೆ, ಬಾಕಿ ಉಳಿದಿರುವ ಪರಿಹಾರ ಪ್ರಕರಣಗಳ ಮಾಹಿತಿಯನ್ನು ‘ಅನುಬಂಧ- 3’ರಲ್ಲಿ ಲಗತ್ತಿಸಲಾಗಿದೆ ಎಂದು ಸರ್ಕಾರ ಉತ್ತರಿಸಿದೆ. ಆದರೆ ವಾಸ್ತವದಲ್ಲಿ ಆ ಅನುಬಂಧ 3 ಅನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿದ್ದು, ದಾಖಲೆಯಲ್ಲಿ ಇರುವುದೇ ಇಲ್ಲ! ರೈತರಿಗೆ ಪರಿಹಾರ ಕೊಡದೆ ಸರ್ಕಾರ ಎಸಗುತ್ತಿರುವ ವಂಚನೆಯನ್ನು ಮುಚ್ಚಿಹಾಕಲು ಈ ರೀತಿ ಮಾಡಲಾಗಿದೆಯೇ?
೨. ಕಿಸಾನ್ ಸಮ್ಮಾನ್ ನಿಧಿ – ರಾಜ್ಯ ಸರ್ಕಾರದ ಕೊಡುಗೆ ಕಡಿತ:
ಕೇಂದ್ರ ಸರ್ಕಾರವು ‘ಪಿ.ಎಂ. ಕಿಸಾನ್’ ಯೋಜನೆಯಡಿ ರೈತರಿಗೆ ವಾರ್ಷಿಕ 6,000 ರೂ.ಗಳನ್ನು ನೀಡುತ್ತಿದೆ. ಹಿಂದಿನ ರಾಜ್ಯ ಸರ್ಕಾರವು ರೈತರ ಮೇಲಿನ ಕಾಳಜಿಯಿಂದ ಈ ಮೊತ್ತದ ಜೊತೆಗೆ ರಾಜ್ಯದ ವತಿಯಿಂದ ಹೆಚ್ಚುವರಿಯಾಗಿ 4,000 ರೂ.ಗಳನ್ನು ನೀಡುತ್ತಿತ್ತು. ಆದರೆ ಪ್ರಸ್ತುತ ಇರುವ ಈ ರೈತ ವಿರೋಧಿ ಸರ್ಕಾರವು, ರೈತರಿಗೆ ಸಿಗುತ್ತಿದ್ದ ಆ 4,000 ರೂ. ಸಹಾಯಧನವನ್ನು ನಿರ್ದಾಕ್ಷಿಣ್ಯವಾಗಿ ನಿಲ್ಲಿಸುವ ಮೂಲಕ ಅನ್ನದಾತರ ಹೊಟ್ಟೆಯ ಮೇಲೆ ಹೊಡೆದಿದೆ. ಇದಲ್ಲದೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೈತ ವಿದ್ಯಾನಿಧಿ ಎಂಬ ಸ್ಕಾಲರ್ಶಿಪ್ ಯೋಜನೆಯನ್ನು ಹಿಂದಿನ ಸರ್ಕಾರ ಆರಂಭಿಸಿತು ಪ್ರಸ್ತುತ ಸರ್ಕಾರ ಸದರಿ ಯೋಜನೆಯನ್ನು ನಿಲ್ಲಿಸಿದೆ.
೩. ಬೆಳೆ ವಿಮೆ ವಂಚನೆ ಹಾಗೂ ಕೆಟ್ಟು ನಿಂತ ಮಳೆಮಾಪನ ಯಂತ್ರಗಳು:
ಕರಾವಳಿ ಮತ್ತು ಮಲೆನಾಡು ಭಾಗದ ರೈತರು ಕೋವಿಡ್ ಹೊಡೆತದ ಜೊತೆಗೆ ಎಲೆಚುಕ್ಕೆ ರೋಗ, ಹಳದಿ ರೋಗ ಮತ್ತು ಕಾಡು ಪ್ರಾಣಿಗಳ ದಾಳಿಯಿಂದ ಕಂಗೆಟ್ಟಿದ್ದಾರೆ. ಇದರ ನಡುವೆ ವಿಪರೀತ ಮಳೆಯಾಗಿ ಬೆಳೆ ನಾಶವಾದರೂ ರೈತರಿಗೆ ಬೆಳೆ ವಿಮೆ ಸಿಗುತ್ತಿಲ್ಲ. ಏಕೆಂದರೆ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಪ್ರಮುಖ ಮಾನದಂಡವಾಗಿರುವ ‘ಮಳೆಮಾಪನ ಯಂತ್ರಗಳು’ ಕೆಟ್ಟು ನಿಂತಿವೆ. ಈ ಯಂತ್ರಗಳನ್ನು ಸಮಯಕ್ಕೆ ಸರಿಯಾಗಿ ದುರಸ್ತಿ ಪಡಿಸಲು ಸರ್ಕಾರಕ್ಕೆ ಕಿಂಚಿತ್ತೂ ಆಸಕ್ತಿ ಇಲ್ಲ. ಯಂತ್ರಗಳು ಕೆಟ್ಟಿರುವುದರಿಂದ ಮಳೆಯ ದಾಖಲಾತಿ ಸರಿಯಾಗಿ ಆಗದೆ, ಕರಾವಳಿ ಮತ್ತು ಮಲೆನಾಡಿನ ರೈತರಿಗೆ “ಮಳೆಯೇ ಆಗಿಲ್ಲ” ಎಂಬ ಅವೈಜ್ಞಾನಿಕ ವರದಿ ನೀಡಿ ವಿಮಾ ಪರಿಹಾರವನ್ನು ನಿರಾಕರಿಸಲಾಗುತ್ತಿದೆ.
ಸರ್ಕಾರವು ಕೇವಲ ಬೂಟಾಟಿಕೆಯ ಮಾತುಗಳನ್ನು ಬಿಟ್ಟು, ಕೂಡಲೇ ಕೆಟ್ಟು ನಿಂತಿರುವ ಮಳೆಮಾಪನ ಯಂತ್ರಗಳನ್ನು ದುರಸ್ತಿಪಡಿಸಬೇಕು. ಸ್ಥಗಿತಗೊಳಿಸಿರುವ ರಾಜ್ಯದ 4,000 ರೂ. ಕಿಸಾನ್ ಸಮ್ಮಾನ್ ಸಹಾಯಧನವನ್ನು ಮರು ಜಾರಿಗೊಳಿಸಬೇಕು ಹಾಗೂ ರೈತರ ಆತ್ಮಹತ್ಯೆ ಪರಿಹಾರದ ಮೊತ್ತವನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ಹೆಚ್ಚಿಸಿ, ಬಾಕಿ ಇರುವ ಎಲ್ಲಾ ಪ್ರಕರಣಗಳಿಗೂ ತಕ್ಷಣವೇ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ರೈತರನ್ನು ಸಂಘಟಿಸಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
