ಮಂಗಳೂರು: ‘ಇ-ಸ್ವತ್ತು 2.0’ ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ಲೋಪಗಳಿಂದಾಗಿ ನಮೂನೆ 11ಎ ಮತ್ತು 11ಬಿ ಅರ್ಜಿಗಳ ವಿಲೇವಾರಿ ತೀವ್ರ ವಿಳಂಬವಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಸಾರ್ವಜನಿಕರು ಮನೆ ನಿರ್ಮಿಸಲು ತೀವ್ರ ಪರದಾಟ ಎದುರಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಸ್ವತ್ತು ತಂತ್ರಾಂಶದ ದೋಷಗಳನ್ನು ತಕ್ಷಣವೇ ಸರಿಪಡಿಸಿ, ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಮೂನೆ 11(ಎ): ರಾಜ್ಯಾದ್ಯಂತ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 23,802 ಅರ್ಜಿಗಳು ಇನ್ನೂ ಅನುಮೋದನೆಗಾಗಿ ಕಾಯುತ್ತಿವೆ. 639 ಅರ್ಜಿಗಳು ತಿರಸ್ಕೃತಗೊಂಡಿದ್ದು, ಇವುಗಳಲ್ಲಿ ಹೆಚ್ಚಿನವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೇರಿವೆ.
ನಮೂನೆ 11(ಬಿ): ಈ ವಿಭಾಗದಡಿ ಸಲ್ಲಿಕೆಯಾದ 15,936 ಅರ್ಜಿಗಳಲ್ಲಿ 8,892 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65 ಮತ್ತು ಉಡುಪಿ ಜಿಲ್ಲೆಯಲ್ಲಿ 436 ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ.
ಹೆಚ್ಚಿದ ಭ್ರಷ್ಟಾಚಾರದ ಆರೋಪ:

ಕಾಗದರಹಿತ ವ್ಯವಸ್ಥೆ ಮತ್ತು ಡಿಜಿಟಲೀಕರಣದ ಹೆಸರಿನಲ್ಲಿ ಸರ್ಕಾರ ಬಡವರನ್ನು ಸಂಕಷ್ಟಕ್ಕೆ ದೂಡಿದೆ. ವ್ಯವಸ್ಥೆಯ ಲೋಪಗಳಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಬಡವರು ಮನೆ ನಿರ್ಮಾಣದ ಪರವಾನಗಿ ಪಡೆಯಲು ₹20 ಸಾವಿರದಿಂದ ₹30 ಸಾವಿರದವರೆಗೆ ಲಂಚ ನೀಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ವಸತಿ ಯೋಜನೆಗಳಡಿ ಯಾವುದೇ ಹೊಸ ಮನೆಗಳು ನಿರ್ಮಾಣವಾಗಿಲ್ಲ ಎಂದು ಕಿಶೋರ್ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
