LATEST NEWS

ಜಿಲ್ಲಾ ಮಟ್ಟದ ವೇಟ್ ಲಿಫ್ಟಿಂಗ್: ವಿಟ್ಲ ಸೈಂಟ್ ರೀಟಾ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ!

ವಿಟ್ಲ: ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ 17 ವರ್ಷ ವಯೋಮಿತಿ ಯೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಭಾರ ಎತ್ತುವ (ವೇಟ್ ಲಿಫ್ಟಿಂಗ್) ಸ್ಪರ್ಧೆಯು ಸೆಪ್ಟೆಂಬರ್ 1ರಂದು ಸೈಂಟ್ ರೀಟಾ ಶಾಲಾ ಆವರಣದಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಅವರು ವೇದಿಕೆಯಲ್ಲಿದ್ದ ಎಲ್ಲಾ ಅತಿಥಿ ಅಭ್ಯಾಗತರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶ್ರೀಯುತ ವಿಷ್ಣು ನಾರಾಯಣ ಹೆಬ್ಬಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಇಲಾಖೆಯ ಆದೇಶ ಹಾಗೂ ಸ್ಪರ್ಧಾ ನಿಯಮಾವಳಿಗಳನ್ನು ಕ್ರೀಡಾಪಟುಗಳಿಗೆ ಸವಿಸ್ತಾರವಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀ ಸತ್ಯ ಸಾಯಿ ಲೋಕಸೇವಾ ಅನುದಾನಿತ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಯುತ ರಾಜೇಂದ್ರ ರೈ ಹಾಗೂ ಆರ್.ಎಂ.ಎಸ್.ಎ ವಿಟ್ಲ ಇದರ ದೈಹಿಕ ಶಿಕ್ಷಕರಾದ ಶ್ರೀಯುತ ವಿದ್ಯಾಶಂಕರ್ ಡಿ. ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ವಂದನೀಯ ಫಾ. ಮೈಕಲ್ ಲೋಬೊ ಅವರು ಮಾತನಾಡಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ತದನಂತರ ವೇದಿಕೆಯಲ್ಲಿದ್ದ ಗಣ್ಯರು ವೇಟ್ ಲಿಫ್ಟಿಂಗ್ ಬಾರ್ಬೆಲ್ಲನ್ನು ರೋಲ್ ಮಾಡುವ ಮೂಲಕ ಪಂದ್ಯಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ವಲೇರಿಯನ್ ವೇಗಸ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಶ್ರೀಮತಿ ಆಶಾ ನಾಯಕ್, ಕ್ಲಸ್ಟರ್ ಮಟ್ಟದ ನೋಡಲ್ ಅಧಿಕಾರಿ ಶ್ರೀಯುತ ಅಶೋಕ್ ಭಟ್, ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಪ್ರೇಮನಾಥ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಭಾರ ಎತ್ತುವ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ತರಬೇತುದಾರರಾದ ಶ್ರೀಯುತ ಪ್ರಮೋದ್ ಕುಮಾರ್ ಶೆಟ್ಟಿ ಹಾಗೂ ಜಂಟಿ ಶಾಲಾ ಮುಖ್ಯ ಶಿಕ್ಷಕರಾದ ಸಿಸ್ಟರ್ ಮರೀನಾ ಮತ್ತು ಸಿಸ್ಟರ್ ಜಾನೆಟ್ ಉಪಸ್ಥಿತರಿದ್ದರು.

ಆತಿಥೇಯ ಶಾಲೆಗೆ ಭರ್ಜರಿ ಜಯ – ರಾಜ್ಯ ಮಟ್ಟಕ್ಕೆ ಆಯ್ಕೆ:

ಬೆಳಗಿನಿಂದ ಸಂಜೆಯವರೆಗೆ ನಿರಂತರವಾಗಿ ವಿವಿಧ ತೂಕದ ವಿಭಾಗಗಳಲ್ಲಿ ನಡೆದ ಬಾಲಕ ಹಾಗೂ ಬಾಲಕಿಯರ ರೋಚಕ ಸ್ಪರ್ಧೆಗಳಲ್ಲಿ ಆತಿಥೇಯ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಶಾಲೆಯ ಬಾಲಕರ 60 ಕೆಜಿ ವಿಭಾಗದಲ್ಲಿ ಮಾಸ್ಟರ್ ಗುರುಪ್ರೀತ್, 98 ಕೆಜಿ ವಿಭಾಗದಲ್ಲಿ ಬಿ. ವಿನೀತ್ ಕುಮಾರ್ ಹಾಗೂ ಬಾಲಕಿಯರ 77 ಕೆಜಿ ತೂಕ ವಿಭಾಗದಲ್ಲಿ ಆಯಿಷತ್ ನೌಫೀದಾ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ.

ರಾಮಕುಂಜ ಮತ್ತು ಸುಳ್ಯಪದವು ಶಾಲೆಗೆ ಸಮಗ್ರ ಪ್ರಶಸ್ತಿ:

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಜಿಲ್ಲಾ ಮಟ್ಟದ ವೇಟ್ ಲಿಫ್ಟಿಂಗ್ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ ರಾಮಕುಂಜ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಸುಳ್ಯಪದವು ಶಾಲೆ ಸಮಗ್ರ ಪ್ರಶಸ್ತಿಯನ್ನು (Over-all Championship) ತಮ್ಮದಾಗಿಸಿಕೊಂಡವು.

ಸಮಾರೋಪ ಸಮಾರಂಭದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಸಂಸ್ಥೆಯು ಈ ಸಂದರ್ಭದಲ್ಲಿ ಸ್ಮರಿಸಿ, ಕೃತಜ್ಞತೆ ಸಲ್ಲಿಸುವುದರೊಂದಿಗೆ ಕ್ರೀಡಾಕೂಟಕ್ಕೆ ಪೂರ್ಣ ವಿರಾಮ ನೀಡಲಾಯಿತು.

Share News