LATEST NEWS

ಕರಾವಳಿಯ ಪ್ರವಾಸೋದ್ಯಮ ಮತ್ತು ಸಮಗ್ರ ಅಭಿವೃದ್ಧಿಗಾಗಿ ಸಚಿವ ಸಂಪುಟ ಸಭೆ -ಶಾಸಕ ಮಂಜುನಾಥ ಭಂಡಾರಿ

ಮಂಗಳೂರು: “ಕರಾವಳಿ ಅಭಿವೃದ್ಧಿಯ ದೃಷ್ಟಿಕೋನವನ್ನು ಇಟ್ಟುಕೊಂಡು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಇದು ನಮ್ಮೆಲ್ಲರ ಕನಸಾಗಿತ್ತು. ಕಡಲ ತಡಿಯಲ್ಲಿ ಸಂಪುಟ ಸಭೆ ನಡೆದರೆ ಇಲ್ಲಿನ ಒಂದಷ್ಟು ಸಮಸ್ಯೆಗಳು ಪರಿಹಾರವಾಗಲಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಇದು ಅತ್ಯಾವಶ್ಯಕವಾದುದು. ಈ ಹಿಂದೆ ಅನೇಕ ಸಂದರ್ಭದಲ್ಲಿ ಇಲ್ಲಿ ಸಚಿವ ಸಂಪುಟ ಸಭೆ ನಡೆಯಬೇಕೆಂದು ಮನವಿಯನ್ನು ಮಾಡಿದ್ದೆ. ಉಸ್ತುವಾರಿ ಸಚಿವ ಖಾದರ್ ಅವರು ಇದಕ್ಕೆ ಒತ್ತಾಸೆಯಾಗಿ ನಿಂತು ಇಂದು ಅಂತಿಮವಾಗಿ ಸಂಪುಟ ಸಭೆ ನಡೆಯುವಲ್ಲಿಗೆ ಬಂದು ನಿಂತಿದೆ.
ಇಲ್ಲಿ ಸಂಪುಟ ಸಭೆ ನಡೆದರೆ ಏನಾಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಭೆಯಿಂದಾಗಿ ಜಿಲ್ಲೆಯ ಅಧಿಕಾರಿಗಳು ಹಾಗೂ ಸರಕಾರದ ನಡುವಿನ ಅಂತರ ಕಡಿಮೆಯಾಗಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳಲಿದೆ“ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ”ಅಭಿವೃದ್ಧಿಯ ವಿಚಾರ ಬಂದಾಗ ಇಲ್ಲಿನ ಎಲ್ಲ ಶಾಸಕರು ಸಂಸದರು ಹಾಗೂ ಅಧಿಕಾರಿಗಳು ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸುತ್ತಾರೆ ಅನ್ನುವುದಕ್ಕೆ ಈ ಸಂಪುಟ ಸಭೆ ಪ್ರಮುಖ ಉದಾಹರಣೆಯಾಗಿದೆ. ಮುಖ್ಯ ಉದ್ದೇಶವೇನೆಂದರೆ ಯುವಜನತೆಗೆ ಉದ್ಯೋಗ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಯಾಗಿದೆ. 100-150 ಎಕರೆ ಜಾಗವನ್ನು ಗುರುತಿಸಿ ಸ್ಟಾರ್ ಹೋಟೆಲ್ ನಿರ್ಮಾಣ, ಕನ್ವೆನ್ಷನ್ ಸೆಂಟರ್ ಅಭಿವೃದ್ಧಿ, ತಲಪಾಡಿಯಿಂದ ಬೈಂದೂರು ವರೆಗೆ ಕೋಸ್ಟಲ್ ಲೈನ್ ಅಭಿವೃದ್ಧಿ, ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ, ಉಡುಪಿಯ ಬೆಳಪುವಿನಲ್ಲಿ ಅರ್ಧಕ್ಕೆ ನಿಂತಿರುವ ಈ ಯೋಜನೆಯನ್ನು ಮತ್ತೆ ಪ್ರಾರಂಭಿಸುವುದು, ಮೀನುಗಾರಿಕಾ ಕಾಲೇಜು ಅಭಿವೃದ್ಧಿ, ಉಡುಪಿ ಜಿಲ್ಲೆಯ ಅಜ್ಜರಕಾಡುವಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, ಮಂಗಳಾ ಕ್ರೀಡಾಂಗಣ ಅಭಿವೃದ್ಧಿ, ಪಿಲಿಕುಳ ಅಭಿವೃದ್ಧಿ, ವಿವಿಧ ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣ, ಕರಾವಳಿಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕೇಂದ್ರ, ಟೆಂಪಲ್ ಟೂರಿಸಂಗೆ ಪ್ರಾಧಾನ್ಯತೆ, ಕರಾವಳಿಯಲ್ಲಿ ಯಕ್ಷಗಾನ, ಕಂಬಳದ ಜೊತೆಗೆ ವಿವಿಧ ಪರಂಪರೆಯ ಕಲೆಗಳಿಗೆ ಕನಿಷ್ಠ 10 ಕೋಟಿ ರೂ. ಬಜೆಟ್ ಮೀಸಲಿಡುವಂತೆ ಬೇಡಿಕೆಯನ್ನು ಸಲ್ಲಿಸಲಾಗಿದೆ“ ಎಂದು ಹೇಳಿದರು.
ಕೊಣಾಜೆಯಿಂದ ಮಣಿಪಾಲದವರೆಗೆ ಮೆಟ್ರೋ ಲೈನ್ ನಿರ್ಮಾಣಕ್ಕೆ ಡಿಪಿಆರ್ ಸಲ್ಲಿಸಲು ಮನವಿ, ಮಂಗಳೂರಿಗೆ ಸಂಪರ್ಕಿಸುವ ಘಾಟ್ ರಸ್ತೆ ಅಭಿವೃದ್ಧಿ, ಸುರಂಗ ರಸ್ತೆ ನಿರ್ಮಾಣ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಈ ಎಲ್ಲ ಯೋಜನೆಗಳ ಕುರಿತು ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ“ ಎಂದು ಭಂಡಾರಿ ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಮಾಜಿ ಅಧ್ಯಕ್ಷ ಹರೀಶ್ ಕುಮಾರ್, ಸುರೇಂದ್ರ ಕಂಬಳಿ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಲಾರೆನ್ಸ್, ಶುಭೋದಯ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Share News