ಪುತ್ತೂರು, ಜೂನ್ 08 : ಅಧಿಕಾರ ಎನ್ನುವುದು ಕೇವಲ ಕಚೇರಿಯ ಎಸಿ ರೂಮಿನಲ್ಲಿ ಕುಳಿತು ಆದೇಶ ಮಾಡುವುದಲ್ಲ, ಅದು ಜನರ ನಡುವೆ ಹೋಗಿ ಅವರ ಕಷ್ಟ ಸುಖಗಳಿಗೆ ಭಾಗಿಯಾಗುವುದು ಎಂಬುದನ್ನು ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಲ್ನಾಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಶಾಸಕರ ಬಡವರ ಪರ ಕಾಳಜಿಗೆ ಸಾಕ್ಷಿಯಾಗಿದೆ.

ಮೇಲಿನ ಚಿತ್ರವನ್ನು ನೋಡಿ, ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಅವರು ವೃದ್ದ ತಾಯಿಯೋರ್ವರಿಗೆ ಎರಡು ಕೈಗಳನ್ನು ಜೋಡಿಸಿ ಕೈ ಮುಗಿಯುತ್ತಿದ್ದಾರೆ. ಈ ಮಹಿಳೆ ಬಲ್ನಾಡು ಗ್ರಾಮದ ನಿವಾಸಿ. ಬಲ್ನಾಡು ಗ್ರಾಮದಲ್ಲಿ ಭಾನುವಾರ ಶಾಸಕರು ವಿವಿಧ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ತೆರಳಿದ್ದರು. ಬರುವ ದಾರಿ ಮಧ್ಯೆ ಒಂದಷ್ಟು ಮಹಿಳೆಯರು ಶಾಸಕರ ಕಾರಿಗೆ ಅಡ್ಡ ನಿಂತು ಇಲ್ಲಿ ಚರಂಡಿ ಇಲ್ಲ ಸರ್ ಮಳೆ ನೀರು ಮನೆಯೊಳಗೆ ಬರುತ್ತದೆ ಒಮ್ಮೆ ಬಂದು ನೋಡಿ ಅಂದ್ರು. ಕಾರಿನಿಂದ ಇಳಿದ ಶಾಸಕರು ಸಮಸ್ಯೆ ವೀಕ್ಷಣೆಗೆ ತೆರಳಿದ ಆ ವೇಳೆ ಅಲ್ಲೊಂದು ಬಡ ಮಹಿಳೆಯ ಮನೆ ಶಾಸಕರ ಕಣ್ಣಿಗೆ ಬೀಳುತ್ತದೆ. ಬಡವರ ಪರ ಸದಾ ವಕಾಲತ್ತು ವಹಿಸುವ ಶಾಸಕರು ಮನೆಯೊಳಗೆ ತೆರಳಿದ್ದಾರೆ…

ಮನೆಯ ಯಜಮಾನಿ ಗಿರಿಜಾ. ವೃದ್ದಾಪ್ಯದಲ್ಲಿದ್ದಾರೆ. ವೃದ್ದ ಮಹಿಳೆಯಲ್ಲಿ ತಮ್ಮ ಕಷ್ಟ ಸುಖಗಳ ಬಗ್ಗೆ ವಿಚಾರಿಸುತ್ತಾರೆ. ಆಗ ಮಹಿಳೆ “ ತಾನು ಈ ಮನೆಯಲ್ಲಿ ೩೦ ವರ್ಷಗಳಿಂದ ವಾಸವಾಗಿದ್ದೇನೆ, ಮಗ ಇದ್ದಾರೆ ಬರುವುದಿಲ್ಲ, ಬೀಡಿ ಕಟ್ಟಿ ಬದುಕುತ್ತಿದ್ದೇನೆ. ಸರಕಾರದಿಂದ ಬರುವ ಪಂಚ ಗ್ಯಾರಂಟಿ ನನ್ನನ್ನು ಜೀವಂತವಾಗಿ ಉಳಿಸಿದೆ ಅದುವೇ ನನಗೆ ಆಧಾರವಾಗಿದೆ ಎಂದು ತನ್ನ ಸಂಪೂರ್ಣ ನೋವುಗಳನ್ನು ಶಾಸಕರ ಮುಂದಿಡುತ್ತಾರೆ. ಮನೆಯಲ್ಲಿ ಅಡುಗೆ ಅನಿಲ ಇಲ್ಲದ್ದನ್ನು ಅರಿತ ಶಾಸಕರು ತಾನು ಗ್ಯಾಸ್ ಸಂಪರ್ಕ ಕೊಡಿಸುವುದಾಗಿ ಭರವಸೆಯನ್ನು ನೀಡುತ್ತಾರೆ. ಮಹಿಳೆ ಸಂತುಷ್ಟರಾಗುತ್ತಾರೆ..

ಒಬ್ಬ ಶಾಸಕ ತನ್ನ ಕ್ಷೇತ್ರದ ಎಲ್ಲಾ ವರ್ಗದ ಜನರ ಕಷ್ಟಗಳನ್ನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಅಧಿಕಾರ ಸಿಕ್ಕಾಗ ಕಚೇರಿಯ ಏ ಸಿ ರೂಮಲ್ಲಿ ಕುಳಿತು ಆದೇಶ ಮಾಡುವ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದೆ ಇನ್ನೂ ಇದ್ದಾರೆ. ಅಧಿಕಾರ ಇರುವ ವೇಳೆ ನಾವು ನಮ್ಮಿಂದ ಏನೆಲ್ಲಾ ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡಿಮುಗಿಸಬೇಕು ಯಾಕೆಂದರೆ ಅಧಿಕಾರ ಇಲ್ಲದೇ ಇರುವಾಗ ಅದನ್ನು ಮಾಡಲು ಸಾಧ್ಯವಿಲ್ಲ ಮತ್ತು ಮನಸ್ಸು ಕೂಡಾ ಬರುವುದಿಲ್ಲ. ಆದರೆ ಪುತ್ತೂರು ಶಾಸಕ ಅಶೋಕ್ ರೈಗಳು ಅಧಿಕಾರ ಇರಲಿ , ಇಲ್ಲದೇ ಇರಲಿ ಬಡವರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಕಳೆದ ೨೦ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಓರ್ವ ಶಾಸಕ ಅಂದ್ರೆ ಆ ಊರಿಗೆ ರಾಜನಿದ್ದಂತೆ. ರಾಜನಾದವ ಜನರ ಬಳಿಗೆ ತೆರಳಿ ಅವ ಜೊತೆ ಬೆರೆಯಬೇಕು ಅವರ ನೋವು ನಲಿವುಗಳಿಗೆ ಸ್ಪಂದನೆ ಮಾಡಬೇಕು ಎಂಬುದು ಶಾಸಕರಿಗೆ ಚೆನ್ನಾಗಿ ಗೊತ್ತಿದೆ ಎಂಬಂತಿದೆ. ಶಾಸಕರಾದ ಬಳಿಕ ಇಂಥಹ ಅನೇಕ ಬಡ ಕುಟುಂಬಗಳಿಗೆ ಆಸರೆಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಕೇವಲ ರಸ್ತೆ, ಮೋರಿ, ಸೇತುವೆ ಅಭಿವೃದ್ದಿ ಮಾತ್ರ ಅಭಿವೃದ್ದಿಯಲ್ಲ ಎಂಬುದನ್ನು ಅರಿತ ಶಾಸಕರು ಸಮಾಜದ ಕಟ್ಟ ಕಡೇಯ ವ್ಯಕ್ತಿ ಮೂರು ಹೊತ್ತಿನ ಊಟ ಮಾಡುತ್ತಿದ್ದಾರ ಎಂಬುದನ್ನು ಅರಿತುಕೊಳ್ಳುವ ಮೂಲಕ ಓರ್ವ ರಾಜನಾದವ ಏನು ಮಾಡಬೇಕೋ ಅದನ್ನೇ ಮಾಡುತ್ತಿದ್ದಾರೆ. ಬಡವರ ಮೇಲಿನ ಪ್ರೀತಿ, ಮಾನವೀಯತೆ ಸದಾ ಹೀಗೇ ಇರಲಿ ಎಂಬುದು ಕ್ಷೇತ್ರದ ಜನತೆಯ ಬಯಕೆ.

