ಮಂಗಳೂರು : ಹಂಪನಕಟ್ಟೆಯ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ 2026-2027 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಮುಖ್ಯ ಅತಿಥಿ, ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು ಮಾತನಾಡಿ, “ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತವಾಗಬಾರದು. ಕಲಿಕೆಯ ಜೊತೆಗೆ ಒಳ್ಳೆಯ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ತುಂಬಾ ಮುಖ್ಯ” ಎಂದು ಹೇಳಿದರು.

ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ: ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಝೈನ್ ಶೇಖ್ ಜಾಕಿರ್, ಉಪಾಧ್ಯಕ್ಷೆ ಕು. ಸಿಂಚನ ಹಾಗೂ ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಗಣ್ಯರು ಬ್ಯಾಡ್ಜ್‌ಗಳನ್ನು ನೀಡಿ ಗೌರವಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೆಲ್ವಿನ್ ವಾಸ್ ಅವರು ನೂತನ ಸದಸ್ಯರಿಗೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಗುರುಗಳಾದ ಐವನ್ ಮೈಕಲ್ ರೊಡ್ರಿಗಸ್ ಅವರು ಮಾತನಾಡಿ, “ವಿದ್ಯಾರ್ಥಿ ಜೀವನವು ಕೇವಲ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ಇದು ಶಿಸ್ತು, ನಾಯಕತ್ವ, ಸಮಯಪ್ರಜ್ಞೆ ಮತ್ತು ವ್ಯಕ್ತಿತ್ವ ವಿಕಸನವನ್ನು ರೂಢಿಸಿಕೊಳ್ಳುವ ಸುವರ್ಣಾವಕಾಶವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ನಿರ್ದೇಶಕರು ಹಾಗೂ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಅತೀ. ವಂದನೀಯ ಗುರುಗಳಾದ ಡಾ| ಆಲ್ವಿನ್ ಸೆರಾವೊ , ಮಿಲಾಗ್ರಿಸ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರು ವಂದನೀಯ ಗುರುಗಳಾದ ಉದಯ ಫೆರ್ನಾಂಡಿಸ್ , ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಡಿಕ್ಸನ್ ಡಿಸೋಜಾ , ಕಾರ್ಯದರ್ಶಿ ಶ್ರೀಮತಿ ಜಸಿಂತಾ ಫೆರ್ನಾಂಡಿಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಲಿಡ್ವಿನ್ ಫೆರ್ನಾಂಡಿಸ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಶೆರಿಲ್ ಪಿಂಟೊ ಅವರು ನೆರೆದ ಸರ್ವರನ್ನು ಸ್ವಾಗತಿಸಿದರು . ಕೊನೆಯಲ್ಲಿ ಕಾಲೇಜು ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಝೈನ್ ಶೇಖ್ ಜಾಕಿರ್ ನೆರೆದಿದ್ದ ಎಲ್ಲ ಗಣ್ಯರಿಗೆ, ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

