ಬೆಂಗಳೂರು, ಜೂನ್ 19: ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಉದ್ಯಮಿಗಳಿಗೆ ಎದುರಾಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಸಭೆಯಲ್ಲಿ ಅವರು ಮಾತನಾಡಿದರು.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಮುಂದಿನ ೧೫ ರಿಂದ ೨೦ ದಿನಗಳಲ್ಲಿ ಸಂಪೂರ್ಣ ವರದಿ ಸಿದ್ಧಪಡಿಸಬೇಕು. ಸಮಸ್ಯೆಗಳ ಜೊತೆಗೆ ಅವುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹೂಡಿಕೆದಾರರಿಗೆ ಸುಗಮ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ವಿವಿಧ ಇಲಾಖೆಗಳ ಅನುಮತಿಗಳನ್ನು ಒಂದೇ ಸೂರಿನಡಿ ಪಡೆಯಲು ‘ಏಕ ಗವಾಕ್ಷಿ ವ್ಯವಸ್ಥೆ’ ಜಾರಿಗೆ ತರಲು ಮುಖ್ಯಮಂತ್ರಿಗಳು ಒಲವು ವ್ಯಕ್ತಪಡಿಸಿದರು.

ಪರಿಸರ ಸ್ನೇಹಿ ಪ್ರವಾಸೋದ್ಯಮ ಹಾಗೂ ಹೆಲಿ ಟೂರಿಸಂ:

ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಸೌಲಭ್ಯ: ರಿಷಬ್ ಶೆಟ್ಟಿ ಸಲಹೆಸಭೆಯಲ್ಲಿ ಭಾಗವಹಿಸಿದ್ದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು, ಕರಾವಳಿಯ ಜನಪದ ಕಲೆ ಮತ್ತು ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ, ಗೋವಾ ಮತ್ತು ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಸಿಎಂ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಮಾಲೋಚನೆ ಸಭೆಯಲ್ಲಿ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ ಜೆ ಜಾರ್ಜ್, ಖ್ಯಾತ ನಟ ರಿಷಬ್ ಶೆಟ್ಟಿ, ಶಾಸಕರಾದ ಜಿ ಟಿ ದೇವೇಗೌಡ, ಸತೀಶ್ ಸೈಲ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.


