ಮಂಗಳೂರು: ಪ್ರಸಿದ್ಧ ಮಿಲಾಗ್ರೇಸ್ ಚರ್ಚ್‌ನ ನೂತನ ಧರ್ಮಗುರುಗಳಾಗಿ (Parish Priest) ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಮಂಗಳವಾರ ಮೇ 19,ಸಂಜೆ ಅಧಿಕಾರ ಸ್ವೀಕರಿಸಿದರು. ವಿಟ್ಲ ಚರ್ಚ್‌ನಿಂದ ಆಗಮಿಸಿದ ಅವರಿಗೆ ಮಿಲಾಗ್ರೇಸ್ ಧರ್ಮಕೇಂದ್ರದ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.

ಸಂಜೆ 4:00 ಗಂಟೆಗೆ ನಡೆದ ಈ ಪದಗ್ರಹಣ ಮತ್ತು ಸ್ವಾಗತ ಸಮಾರಂಭದಲ್ಲಿ ಮಂಗಳೂರು ಬಿಷಪರ ಪ್ರತಿನಿಧಿಯಾಗಿ ವಂ| ಫಾದರ್ ವಲೇರಿಯನ್ ಡಿಸೋಜಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ 14 ಕ್ಕೂ ಹೆಚ್ಚು ಧರ್ಮಗುರುಗಳು, ವಿವಿಧ ಕಾನ್ವೆಂಟ್‌ಗಳ ಧರ್ಮಭಗಿನಿಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕ ಸದ್ಭಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ, ಮಿಲಾಗ್ರೇಸ್ ಚರ್ಚ್‌ನಲ್ಲಿ ಸುದೀರ್ಘ ಹಾಗೂ ಶ್ರದ್ಧಾಪೂರ್ವಕ ಸೇವೆ ಸಲ್ಲಿಸಿ ವರ್ಗಾವಣೆಗೊಳ್ಳುತ್ತಿರುವ ನಿಕಟಪೂರ್ವ ಧರ್ಮಗುರು ವಂ| ಫಾದರ್ ಬೊನವೆಂಚರ್ ನಜರೆತ್ ಅವರಿಗೆ ಕೃತಜ್ಞತೆ ಸಲ್ಲಿಸಿ ಭವಿಷ್ಯದ ದಿನಗಳಿಗೆ ಶುಭ ಹಾರೈಸಲಾಯಿತು.

ಮಿಲಾಗ್ರೇಸ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಡಿಕ್ಸನ್ ಡಿಸೋಜಾ ಅವರು ಚರ್ಚ್ ಹಾಗೂ ಅದರ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳ ಪರಿಚಯ ಮಾಡಿಕೊಟ್ಟರು. ವಿಟ್ಲ ಚರ್ಚ್‌ನ ಧರ್ಮಗುರುಗಳಾದ ವಂ| ಫಾದರ್ ಮೈಕಲ್ ಲೋಬೋ ಅವರು ನೂತನ ಧರ್ಮಗುರು ವಂ| ಐವನ್ ಮೈಕಲ್ ರೊಡ್ರಿಗಸ್ ಅವರನ್ನು ನೆರೆದಿದ್ದ ಭಕ್ತಾದಿಗಳಿಗೆ ಪರಿಚಯಿಸಿದರು

ಬಿಷಪರ ಪ್ರತಿನಿಧಿ ವಂ| ಫಾದರ್ ವಲೇರಿಯನ್ ಡಿಸೋಜಾ ಮಾತನಾಡಿ, ನಿರ್ಗಮಿತ ಧರ್ಮಗುರುಗಳ ಸೇವೆಯನ್ನು ಶ್ಲಾಘಿಸಿದರು ಹಾಗೂ ನೂತನ ಧರ್ಮಗುರುಗಳ ಕುರಿತು ಪ್ರಭುವಿನ ಆಶೀರ್ವಾದವನ್ನು ಬೇಡಿದರು. ನಿರ್ಗಮಿತ ಧರ್ಮಗುರು ವಂ| ಫಾದರ್ ಬೊನವೆಂಚರ್ ನಜರೆತ್ ಅವರು ನೂತನ ಧರ್ಮಗುರುಗಳನ್ನು ಪ್ರೀತಿಯಿಂದ ಸ್ವಾಗತಿಸಿ, ಚರ್ಚ್‌ನ ಭಕ್ತಾದಿಗಳಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ನೂತನ ಧರ್ಮಗುರು ವಂ| ಐವನ್ ಮೈಕಲ್ ರೊಡ್ರಿಗಸ್, “ವಿಟ್ಲ ಧರ್ಮಕೇಂದ್ರದಲ್ಲಿ ಕಳೆದ 6 ವರ್ಷಗಳ ನನ್ನ ಸೇವಾವಧಿಯಲ್ಲಿ ಅಲ್ಲಿನ ಜನತೆ ನೀಡಿದ ಪ್ರೀತಿ ಮತ್ತು ಸಹಕಾರಕ್ಕೆ ನಾನು ಚಿರಋಣಿ. ಅದೇ ರೀತಿಯ ಪ್ರೀತಿ, ಪ್ರಾರ್ಥನೆ ಮತ್ತು ಸಹಕಾರ ಮಿಲಾಗ್ರೇಸ್ ಭಕ್ತಾದಿಗಳಿಂದಲೂ ಸಿಗಲಿದೆ ಎಂಬ ಭರವಸೆ ನನಗಿದೆ” ಎಂದರು.

ವಂ| ಫಾದರ್ ಅವಿತ್ ಪಾಯ್ಸ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ಧರ್ಮಗುರುಗಳ ಮುಂದಿನ ಧಾರ್ಮಿಕ ಸೇವೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುವ ಮೂಲಕ ಸಮಾರಂಭವು ಸಂಪನ್ನಗೊಂಡಿತು.



























