ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ (MCC) ಆಯುಕ್ತರಾದ ಶ್ರೀ ರಾಹುಲ್ ರತ್ನಂ ಪಾಂಡೆ ಅವರು ನಗರದ ಬಿಕರ್ನಕಟ್ಟೆ ಪರಿಸರದ ಜಯಶ್ರೀ ಗೇಟ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಸಾರ್ವಜನಿಕರ ಅಹವಾಲು ಆಲಿಸಿದರು.

ಸ್ಥಳೀಯ ನಿವಾಸಿ ಸ್ಟೇನಿ ಬಂಟ್ವಾಳ್ ಅವರು ಆಯುಕ್ತರಿಗೆ ಪರಿಸರದ ಪ್ರಮುಖ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿ, “ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಮಹಾನಗರ ಪಾಲಿಕೆಯ ನಡುವಿನ ತಾಂತ್ರಿಕ ಗೊಂದಲಗಳಿಂದಾಗಿ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ” ಎಂದು ದೂರಿದರು.

“ಜಯಶ್ರೀ ಗೇಟ್ ಪರಿಸರದಲ್ಲಿ ಪ್ರಮುಖ ಮಂದಿರ ಗಳು, ಚರ್ಚ್, ಮಸೀದಿ, ಶಾಲೆ, ಕಾಲೇಜುಗಳು, ವಾಣಿಜ್ಯ ಅಂಗಡಿಗಳು ಹಾಗೂ ಮಾಲ್‌ಗಳು ಇವೆ. ನಿತ್ಯ ಸಾವಿರಾರು ಜನರು ಓಡಾಡುವ ಈ ಜಾಗದಲ್ಲಿ ಚರಂಡಿಯ ಗಲೀಜು ನೀರು ಕೆಲವೊಮ್ಮೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಹರಿಯುತ್ತದೆ. ಇದರೊಂದಿಗೆ ಬೀದಿದೀಪಗಳು ಕೂಡ ಸರಿಯಾಗಿ ಉರಿಯುತ್ತಿಲ್ಲ” ಎಂದು ಸ್ಥಳೀಯರು ಆಯುಕ್ತರ ಗಮನಕ್ಕೆ ತಂದರು.

ಸ್ಥಳೀಯರ ದೂರುಗಳನ್ನು ಆಲಿಸಿದ ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು, ಜಯಶ್ರೀ ಗೇಟ್ ಪರಿಸರದ ಸಮಸ್ಯೆಗಳ ಕುರಿತು ತಕ್ಷಣವೇ ಸಮಗ್ರ ವರದಿ ನೀಡುವಂತೆ ಜೊತೆಯಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಸ್ಥಳೀಯ ನಿವಾಸಿಗಳ ಸಮಸ್ಯೆಗಳಿಗೆ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿ ಗಳಾದ ನರೇಶ್ ಶೆಣೈ, ಪುನೀತ್, ಮಂಜುನಾಥ್, ಶಿವಲಿಂಗಪ್ಪ ಹಾಗೂ ಸ್ಥಳೀಯ ಪ್ರಮುಖರಾದ ಮಾಜಿ ಮೇಯರ್ ಶ್ರೀಮಾನ್ ಪಿ. ಎಂ. ಕ್ಯಾಸ್ಟಲಿನೋ, ಶ್ರೀ ಕಿರಣ್ ಕ್ಯಾಸ್ಟಲಿನೋ, ಶ್ರೀ ವಿನ್ಸೆಂಟ್ ರೋಡ್ರಿಗಸ್, ಪ್ರಕಾಶ್ ಸಲ್ದಾನ್ಹ, ಜೀವನ್, ಶಮೀರ್, ಶರೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
