ಮಂಗಳೂರು: ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ‘ದಾಂಡಿಯಾ’ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಗರದ ವಿವಿಧೆಡೆ ಆಯೋಜಿಸಲಾಗುತ್ತಿರುವ ಅಸಭ್ಯ ನೃತ್ಯ, ಫ್ಯಾಷನ್ ಶೋ ಹಾಗೂ ಪಾಶ್ಚಿಮಾತ್ಯ ಪಾರ್ಟಿ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿ ದುರ್ಗಾವಾಹಿನಿ ಮತ್ತು ಬಜರಂಗದಳ ಸಂಘಟನೆಯ ಪ್ರಮುಖರು ಪೊಲೀಸ್ ಉಪ ಆಯುಕ್ತರನ್ನು (DCP) ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ನವರಾತ್ರಿಯು ಭಾರತೀಯ ಸನಾತನ ಸಂಸ್ಕೃತಿಯ ಅತ್ಯಂತ ಶ್ರದ್ಧೆ-ಭಕ್ತಿಯ ಹಬ್ಬವಾಗಿದೆ. ಈ ದಿನಗಳಲ್ಲಿ ನಡೆಯುವ ‘ದಾಂಡಿಯಾ/ಗರ್ಬಾ’ ನೃತ್ಯವು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಆದರೆ, ಮಂಗಳೂರು ನಗರದ ಪಬ್‌ಗಳು, ಪಾರ್ಟಿ ಹಾಲ್‌ಗಳು ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಡಿಜೆ ಮ್ಯೂಸಿಕ್ ಹಾಗೂ ಅಶ್ಲೀಲ ಪಾರ್ಟಿಗಳನ್ನು ಆಯೋಜಿಸುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಂಘಟನೆಗಳು ತಿಳಿಸಿವೆ.

ಇಂತಹ ಕಾರ್ಯಕ್ರಮಗಳ ಮುಖಾಂತರ ಮದ್ಯ ಹಾಗೂ ಮಾದಕ ದ್ರವ್ಯಗಳ (ಡ್ರಗ್ಸ್) ಸೇವನೆಗೆ ಆಸ್ಪದ ಮಾಡಿಕೊಡಲಾಗುತ್ತಿದೆ ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ. ದಾಂಡಿಯಾದ ಪವಿತ್ರ ಹೆಸರನ್ನು ಬಳಸಿಕೊಂಡು ಯುವಜನತೆಯನ್ನು ದುರ್ಮಾರ್ಗಕ್ಕೆ ಎಳೆಯುವ ಇಂತಹ ಪಾಶ್ಚಿಮಾತ್ಯ ಸಂಸ್ಕೃತಿಯ ಕಾರ್ಯಕ್ರಮಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಇಂತಹ ಯಾವುದೇ ಅಶ್ಲೀಲ ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನೀಡಬಾರದು ಮತ್ತು ನಿಯಮ ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸುವ ಸಂಘಟಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಪೊಲೀಸ್ ಠಾಣೆಗಳಿಗೂ ದೂರು ನೀಡಲಾಗಿದೆ ಎಂದು ಪ್ರಾಂತ ಮಾತೃಶಕ್ತಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್ ಮತ್ತು ಜಿಲ್ಲಾ ಬಜರಂಗದಳ ಸಂಯೋಜಕ ಪ್ರೀತಮ್ ಕಾಟಿಪಳ್ಳ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
