ಮಂಗಳೂರು: ಮೇ, 28: ಮಾನವಕುಲವು ಪ್ರಕೃತಿಯೆಡೆಗೆ ಹೆಚ್ಚಿನ ವಿನಯ, ಕರುಣೆ ಮತ್ತು ಪೂಜ್ಯಭಾವನೆಯಿಂದ ಬದುಕಬೇಕು ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಕರೆ ನೀಡಿದರು. ಮಂಗಳೂರಿನ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆದಿರುವ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಅಮ್ಮ, ಮನುಷ್ಯನು ಸಹಮಾನವರೊಂದಿಗೆ ಸಹಕಾರದಿಂದ, ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಮತ್ತು ಈಶ್ವರನ ಜೊತೆಗೆ ಸಂಪರ್ಕವಿರಿಸಿಕೊಂಡು ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು. ಸಾಂಕ್ರಾಮಿಕ ರೋಗಗಳು, ನೈಸರ್ಗಿಕ ವಿಕೋಪಗಳು ಮತ್ತು ಹವಾಮಾನ ವೈಪರೀತ್ಯಗಳು ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಮರುಚಿಂತನೆ ಮಾಡಲು ಮಾನವಕುಲಕ್ಕೆ ನೀಡುತ್ತಿರುವ ಎಚ್ಚರಿಕೆಯ ಕರೆಗಳಾಗಿವೆ ಎಂದು ಅವರು ತಿಳಿಸಿದರು.

ಜನರು, ಸಮುದಾಯಗಳು ಮತ್ತು ರಾಷ್ಟ್ರಗಳ ನಡುವಿನ ಸಂಘರ್ಷಗಳಲ್ಲಿ ಸಂಧಾನ ಹಾಗೂ ರಾಜಿ ಸೂತ್ರಗಳು ಕೆಲಸ ಮಾಡಬಹುದು, ಆದರೆ ಪ್ರಕೃತಿಯೊಂದಿಗೆ ಇವುಗಳು ನಡೆಯುವುದಿಲ್ಲ ಎಂದು ಅಮ್ಮ ನುಡಿದರು. “ಪ್ರಕೃತಿಯನ್ನು ಸಮೀಪಿಸಲು ಇರುವ ಏಕೈಕ ಪರಿಣಾಮಕಾರಿ ಮಾರ್ಗವೆಂದರೆ, ಅಹಂಕಾರವನ್ನು ತೊರೆದು, ತಲೆಬಾಗಿ, ವಿನಯ, ಸ್ನೇಹ ಮತ್ತು ಪೂಜ್ಯಭಾವನೆಯಿಂದ ತುಂಬಿದ ಹೃದಯದೊಂದಿಗೆ ಆಕೆಯನ್ನು ಆರಾಧಿಸುವುದಾಗಿದೆ” ಎಂದು ಅವರು ಹೇಳಿದರು. ಮಾನವರು ಈ ಭೂಮಿ, ಅದರ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸಮೃದ್ಧಿಯನ್ನು ಸಹಜೀವಿಗಳು ಹಾಗೂ ಇತರ ಪ್ರಾಣಿ-ಪಕ್ಷಿಗಳೊಂದಿಗೆ ಸಾಮೂಹಿಕವಾಗಿ ಹಂಚಿಕೊಂಡು ಬದುಕಬೇಕು ಎಂಬ ಜಾಗೃತಿಯೇ ನಿಜವಾದ ಸಹಬಾಳ್ವೆಗೆ ಅಡಿಪಾಯವಾಗಿದೆ ಎಂದು ಅಮ್ಮ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಅಮ್ಮನವರ ಕಾರ್ಯಗಳು ಕೇವಲ ಆಧ್ಯಾತ್ಮಿಕತೆಗೆ ಸೀಮಿತವಾಗಿರದೆ, ಸಾಮಾಜಿಕ ಜೀವನದ ಹಲವು ಕ್ಷೇತ್ರಗಳನ್ನು ಸ್ಪರ್ಶಿಸಿವೆ ಎಂದು ಶ್ಲಾಘಿಸಿದರು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಆಧ್ಯಾತ್ಮಿಕ ಶಕ್ತಿಗೆ ಶಾಶ್ವತ ಮೌಲ್ಯವಿದ್ದು, ಸಾರ್ವಜನಿಕ ಜೀವನದಲ್ಲಿ ಇರುವವರು ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮಾನಂದ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಉಡುಪಿಯ ಶಾಸಕರಾದ ಯಶಪಾಲ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, , ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್, ಕಿಶೋರ್ ಆಳ್ವ, ಪ್ರಕಾಶ್ ಪೈ ಪೆರಾಜೆ,ವೇದಪ್ರಕಾಶ್ ಶ್ರೀಯಾನ್, ಗೌರವಾಧ್ಯಕ್ಷರುಗಳಾದ ಡಾ ಜೀವರಾಜ್ ಸೊರಕೆ, ಸಿ ಎ ವಾಮನ್ ಕಾಮತ್, ಶ್ರುತಿ ಹೆಗ್ಡೆ,ಡಾ ವಸಂತ ಕುಮಾರ್‍ಪ್ ಪೆರ್ಲ, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ ವೈ ಸನತ್ ಹೆಗ್ಡೆ ಸಭೆನ್ನುದ್ದೇಶಿಸಿ ತನ್ನ ಅಮ್ಮನ ಅನುಯಾಯಿಯಾಗಿ ಜೀವನದಲ್ಲಿ ಕಂಡುಬಂದ ಸಕಾರಾತ್ಮಕ. ಅಉಭವಗಳನ್ನು ಹಂಚಿಕೊಂಡರು.
ಸೇವಾಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಸ್ವಾಗತಿಸಿದರು.ಡಾ ಅಶೋಕ್ ಶೆಣೈ ಮತ್ತು ಡಾ ನಂದಿತಾ ಶೆಣೈ ನಿರೂಪಣೆ ಮಾಡಿದರು.
ಈ ಮಹೋತ್ಸವದ ಅಂಗವಾಗಿ ಮಠದ ವತಿಯಿಂದ ಹಲವಾರು ಕಲ್ಯಾಣ ಯೋಜನೆಗಳಿಗೆ ಚಾಲನೆ ಮತ್ತು ನೆರವು ನೀಡಲಾಯಿತು. ಇದರಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಕ್ಕಳಿಗೆ ನೆರವು, ಅಮೃತಶ್ರೀ (AmritaSREE) ಸ್ವಸಹಾಯ ಗುಂಪಿನ 1,200 ಸದಸ್ಯರಿಗೆ ಆರ್ಥಿಕ ಸಾಲ-ಸಹಾಯ, ಕರಾವಳಿ ಜನರ ಜೀವನೋಪಾಯಕ್ಕಾಗಿ ಕಡಲ ಕಳೆ (Seaweed) ಕೃಷಿ ಯೋಜನೆ ಮತ್ತು ಆಯುಧ್ (AYUDH) ಮಂಗಳೂರು ನೇತೃತ್ವದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನಗಳು ಸೇರಿವೆ. ಉತ್ಸವದ ಭಾಗವಾಗಿ ವಿಶೇಷ ಪೂಜೆಗಳು, ದರ್ಶನ, ಸ್ವಯಂಸೇವಕರಿಂದ ಸೇವಾ ಚಟುವಟಿಕೆಗಳು, ಉಚಿತ ವೈದ್ಯಕೀಯ ಶಿಬಿರ, ಅನ್ನದಾನ ಹಾಗೂ ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

