ಪುತ್ತೂರು: ಭಾನುವಾರದಂದು ಪುತ್ತೂರು ಶಾಅಕ ಅಶೋಕ್ ರೈ ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಶಾಲೆಯ ಬಳಿ ಚರಂಡಿ ಇಲ್ಲದೆ ರಸ್ತೆ ಮೇಲೆ ಮಳೆ ನೀರು ಹರಿಯುತ್ತಿರುವುದನ್ನು ಗಮನಿಸಿ ಸ್ವಯಂ ಆಗಿ ಹಾರೆ ಹಿಡಿದು ಚರಂಡಿ ಬಿಡಿಸುವ ಕೆಲಸವನ್ನು ಮಾಡಿದ್ದು ಇದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ರಸ್ತೆ ಬದಿ ಯಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದು ಅದನ್ನು ತೆರವು ಮಾಡದ ವಿಚಾರ ಇಂಜಿನಿಯರ್ ಗಳ ಗಮನಕ್ಕೂ ಬರುವಂತಾಗಿತ್ತು.
ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಎಂಬಂತೆ ಶಾಸಕರ ಕಾರ್ಯಯೋಜನೆ ನಡೆದಿತ್ತು.
ಇಂದು ಬೆಳಿಗ್ಗೆ ಮಾಣಿ- ಸಂಪಾಜೆ ರಾ. ಹೆದ್ದಾರಿಯ ಚರಂಡಿಯಲ್ಲಿ ಹೂಳೆತ್ತುವ ಕೆಲಸಕ್ಕೆ ರಾ.ಹೆದ್ದಾರಿ ಇಲಾಖೆ ಮುಂದಾಗಿದೆ. ಹೆದ್ದಾರಿಯ ಸಂಪ್ಯ, ಸಂಟ್ಯಾರ್,ಪರ್ಪುಂಜ ಹಾಗೂ ಇನ್ನಿತರ ಕಡೆಗಳಲ್ಲಿ ರಸ್ತೆ ಬದಿ ಚರಂಡಿಯ ಹೂಳೆತ್ತುವ ಕೆಲಸ ಆರಂಭವಾಗಿದೆ.
ಶಾಸಕರೇ ಸ್ವಯಂ ಆಗಿ ಚರಂಡಿಯನ್ನು ಬಿಡಿಸುವ ಮೂಲಕ ಅಧಿಕಾರಿಗಳ ಚಳಿ ಬಿಡಿಸುವ ಕೆಲಸವನ್ನು ಮಾಡಿದ ಶಾಸಕರಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಭಾನುವಾರ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಸರಕಾರಿ ಹಿ ಪ್ರಾ ಶಾಲಾ ಬಳಿ ಮಳೆ ನೀರು ರಸ್ತೆಯಲ್ಲೇ ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇದನ್ನು ನೋಡಿದ ಶಾಸಕ ಅಶೋಕ್ ರೈ ಅವರು ಪಕ್ಕದ ಮನೆಯೊಂದರಿಂದ ಹಾರೆಯನ್ನು ತರಿಸಿ ರಸ್ತೆ ಬದಿಯಲ್ಲಿ ಬ್ಲಾಕ್ ಆಗಿದ್ದ ಕಣಿಯನ್ನು ಸ್ವಚ್ಚ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.