LATEST NEWS

‘ಮಳೆಗಾಲದ ನೆನಪು’ ಹಾಗೂ ದತ್ತಿನಿಧಿ ಪುರಸ್ಕಾರ ಕಾರ್ಯಕ್ರಮ

ಮಂಗಳೂರು: ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಉರ್ವಸ್ಟೋರ್ ಮತ್ತು ಯಶಸ್ವಿನಿ ಮಹಿಳಾ ಮಂಡಲಿ (ರಿ.) ಬಲ್ಮಠ ಇವುಗಳ ಜಂಟಿ ಆಶ್ರಯದಲ್ಲಿ ‘ಮಳೆಗಾಲದ ನೆನಪು’, ‘ಕೆ.ಎ. ರೋಹಿಣಿ ದತ್ತಿನಿಧಿ’ ಮತ್ತು ‘ಶೈಲಾ ಸುಂದರ್ ಪುರಸ್ಕಾರ’ ಕಾರ್ಯಕ್ರಮವು ಇತ್ತೀಚೆಗೆ ಉರ್ವಸ್ಟೋರಿನ ಒಕ್ಕೂಟದ ವನಿತಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಯಶಸ್ವಿನಿ ಮಹಿಳಾ ಮಂಡಲಿಯ ಗೌರವಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ಶೆಟ್ಟಿ ಅವರು ಮಾತನಾಡಿ, “ಪ್ರಸ್ತುತ ಎಲ್ಲೆಡೆ ಆಟಿ ತಿಂಗಳ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಒಕ್ಕೂಟವು ಮಕ್ಕಳ ಕಲಿಕಾ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಒಕ್ಕೂಟದ ವಿಭಿನ್ನ ಚಿಂತನೆಗಳು ಇತರರಿಗೆ ಮಾದರಿಯಾಗಿವೆ” ಎಂದರು.

ಮಳೆಗಾಲದ ನೆನಪುಗಳ ಮೆಲುಕು: ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕಿ ಶ್ರೀಮತಿ ತಾರಾ ಕುಮಾರಿ ಅವರು ಬಾಲ್ಯದ ಮಳೆಗಾಲದ ನೆನಪುಗಳನ್ನು ಹಂಚಿಕೊಂಡರು. “ಹಿಂದೆ ಮಳೆಗಾಲದಲ್ಲಿ ಎದುರಿಸುತ್ತಿದ್ದ ಕಷ್ಟಗಳು, ಮನೆಯ ಸ್ಥಿತಿಗತಿಗಳು ಮತ್ತು ಜನರು ಪರಸ್ಪರ ನೆರವಾಗುತ್ತಿದ್ದ ರೀತಿ ಅನನ್ಯವಾಗಿತ್ತು. ಆಷಾಡ ಮಾಸವು ಹಿಂದೆ ಕಷ್ಟ ಕಾರ್ಪಣ್ಯದ ದಿನಗಳಾಗಿದ್ದವು. ಅಂದು ಹಿರಿಯರು ವಹಿಸುತ್ತಿದ್ದ ಮುಂಜಾಗ್ರತೆಗಳು ಮತ್ತು ಇಂದು ಅದೇ ಆಷಾಡವನ್ನು ಸಂಭ್ರಮದಿಂದ ಆಚರಿಸುತ್ತಿರುವ ವೈವಿಧ್ಯತೆಯನ್ನು” ಅವರು ಸುಂದರವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಚಂಚಲಾ ತೇಜೋಮಯ ಅವರು ಮಾತನಾಡಿ, “ಒಕ್ಕೂಟವು ಪ್ರತಿ ವರ್ಷವೂ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಓರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ತಲಾ 10,000 ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸುತ್ತಾ ಬಂದಿದೆ” ಎಂದರು.

ಈ ವರ್ಷ ಕುಮಾರಿ ಶಿಲ್ಪಾ ವಿಧಾತ್ರಿ ನಂದೇರ ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಪುತ್ತೂರು ಇವರು ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ಜಿಲ್ಲಾಮಟ್ಟದಲ್ಲಿ ಗರಿಷ್ಠ ಅಂಕವನ್ನು ಪಡೆದು ಕೆ.ಎ.ರೋಹಿಣಿ ದತ್ತಿನಿಧಿ ಪುರಸ್ಕಾರ ಹಾಗೂ ಮಾಸ್ಟರ್ ಹರ್ಷಿತ್ ಪೂಜಾರಿ ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಬಂಟ್ವಾಳ ಇವರು ಶೈಲಾ ಸುಂದರ್ ಪುರ‌ಸ್ಕಾರವನ್ನು ಪಡೆದುಕೊಂಡರು.

ಗೌರವ ಪುರಸ್ಕ್ರತ ಮಕ್ಕಳನ್ನು ಉದ್ದೇಶಿಸಿ ನಮಗೆ ಸಮಾಜ ಏನಾದರೂ ಕೊಡುಗೆ ಕೊಟ್ಟರೆ ಅದಕ್ಕೆ ಪೂರಕವಾಗಿ ನಾವೂ ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎನ್ನುವ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಒಕ್ಕೂಟದೊಂದಿಗೆ ಎಲ್ಲಾ ಮಹಿಳಾ ಮಂಡಳಿಗಳು ಸೇರಿಕೊಂಡು ಕೆಲಸ ಮಾಡುವಾಗ ನಮ್ಮೊಳಗೆ ಅರಿವಿಲ್ಲದೆ ಒಂದು ಅವಿನಾಭಾವ ಸಂಬಂಧ ಏರ್ಪಡುತ್ತದೆ. ಹಾಗೆಯೇ ಈ ವರ್ಷ ಯಶಸ್ವಿನಿ ಮಹಿಳಾ ಮಂಡಳಿಯ ಬೆಳ್ಳಿ ಹಬ್ಬವನ್ನು ಆಚರಿಸುವ ಸಲುವಾಗಿ 25 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರ ಸಹಕಾರವನ್ನು ಕೋರಿದರು. ಎಲ್ಲಾ ಮಹಿಳಾ ಮಂಡಳಿಗಳು ಮಹಿಳೆಯರಿಗಾಗಿ ಸಾಮಾಜಿಕ ಹಾಗೂ ಶೈಕ್ಷಣಿಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರ ಸದುಪಯೋಗ ಎಲ್ಲರೂ ಪಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿಯರಾದ ದೇವಕಿ ಅಚ್ಯುತ, ಅನುರಾಧಾ ರಾಜೀವ್, ಭಾರತಿ ಮಂಜುನಾಥ, ಜಯಾ ಕುಮಾರಿ, ಶಾಂತಾ, ರಮಣಿ ಬೋಳೂರು ರೇಣುಗಜೇಂದ್ರ, ಸರಿತಾ, ಅನಿತಾ, ಜ್ಯೋತಿ, ದಯಾಮಣಿ, ರಮಣಿ ಮೊದಲಾದವರು ಉಪಸ್ಥಿತರಿದ್ದರು.ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿ ಶೆಟ್ಟಿ ಸ್ವಾಗತಿಸಿ ಯಶಸ್ವಿನಿ ಮಹಿಳಾ ಮಂಡಲಿಯ ಕಾರ್ಯದರ್ಶಿ ಶ್ರೀಮತಿ ನಾಗವೇಣಿ ವಂದಿಸಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ರೇಖಾ ಶೆಟ್ಟಿ ನಿರೂಪಿಸಿದರು.

Share News