HOMELATEST NEWS

ಜಾಗತಿಕ ಹಡಗು ನಿರ್ಮಾಣದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಮಂಗಳೂರು: ಚೌಗುಲೆ ಶಿಪ್ಯಾರ್ಡ್‌ನಿಂದ ಅಪೂರ್ವ ಮೈಲಿಗಲ್ಲು

ಮಂಗಳೂರು: ಭಾರತದ ಕಡಲ ತೀರದ ಉತ್ಪಾದನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಮಂಗಳೂರಿನ ಚೌಗುಲೆ ಶಿಪ್ಯಾರ್ಡ್ ಜಾಗತಿಕ ಹಡಗು ನಿರ್ಮಾಣ ಭೂಪಟದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಕೇವಲ ಒಂದೇ ವಾರದಲ್ಲಿ ಜರ್ಮನಿಯ ಪ್ರಸಿದ್ಧ ಹಡಗು ಸಂಸ್ಥೆಯೊಂದಿಗೆ ಮೂರು ಪ್ರಮುಖ ಒಪ್ಪಂದ ಹಾಗೂ ಸಾಧನೆಗಳನ್ನು ಪೂರ್ಣಗೊಳಿಸುವ ಮೂಲಕ ಮಂಗಳೂರು ನಗರವನ್ನು ಹಡಗು ನಿರ್ಮಾಣದ ಜಾಗತಿಕ ಕೇಂದ್ರವನ್ನಾಗಿ ಮುಂಚೂಣಿಗೆ ತಂದಿದೆ.

ಆಗಸ್ಟ್ 26 ರಂದು ಚೌಗುಲೆ ಶಿಪ್ಯಾರ್ಡ್, ಜರ್ಮನಿಯ ಖ್ಯಾತ ‘ಲಿಯೊನ್‌ಹಾರ್ಡ್ ಮತ್ತು ಬ್ಲಂಬರ್ಗ್’ (Leonhardt & Blumberg) ಹಡಗು ಸಂಸ್ಥೆಗಾಗಿ ನಿರ್ಮಿಸುತ್ತಿರುವ 8,500 ಡಿಡಬ್ಲ್ಯೂಟಿ (DWT) ಸಾಮರ್ಥ್ಯದ ಮಲ್ಟಿ-ಪರ್ಪಸ್ ಕಾರ್ಗೋ ಹಡಗುಗಳ ಸರಣಿಯ ಎರಡನೇ ನೌಕೆಯಾದ ‘ಎಂವಿ ಹನ್ಸಾ ಅನ್‌ಹೋಲ್ಟ್’ (MV HANSA ANHOLT) ಅನ್ನು ಯಶಸ್ವಿಯಾಗಿ ಹಸ್ತಾಂತರಿಸಿದೆ. ಇದೇ ಸಂದರ್ಭದಲ್ಲಿ, ಜಾಗತಿಕ ಹಡಗು ದೈತ್ಯ ಸಂಸ್ಥೆಯೊಂದಿಗಿನ ತನ್ನ ದೀರ್ಘಾವಧಿಯ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ ಶಿಪ್ಯಾರ್ಡ್, ಅದೇ 8,500 ಡಿಡಬ್ಲ್ಯೂಟಿ ವಿಭಾಗದಲ್ಲಿ ಹೆಚ್ಚುವರಿ ಹಡಗನ್ನು ನಿರ್ಮಿಸಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಸಂಭ್ರಮದ ಬೆನ್ನಲ್ಲೇ, ಆಗಸ್ಟ್ 28 ರಂದು ಲಿಯೊನ್‌ಹಾರ್ಡ್ ಮತ್ತು ಬ್ಲಂಬರ್ಗ್ ಸಂಸ್ಥೆಗಾಗಿ ನಡೆಯುತ್ತಿರುವ ಸರಣಿಯ ಮೂರನೇ ಹಡಗನ್ನು ಯಶಸ್ವಿಯಾಗಿ ಜಲಾವತರಣ (Launch) ಮಾಡುವ ಮೂಲಕ ಶಿಪ್ಯಾರ್ಡ್ ಮತ್ತೊಂದು ದೊಡ್ಡ ಮೈಲಿಗಲ್ಲನ್ನು ಮುಟ್ಟಿದೆ. ಈ ಉಡಾವಣೆಯು ಯೋಜನೆಯ ಯಶಸ್ವಿ ಅನುಷ್ಠಾನವನ್ನು ಸಾಬೀತುಪಡಿಸಿದ್ದು, ಶಿಪ್ಯಾರ್ಡ್‌ನ ಗುಣಮಟ್ಟ, ನಿಖರತೆ ಮತ್ತು ಸಮಯಕ್ಕೆ ಸರಿಯಾಗಿ ವಿತರಿಸುವ ಬದ್ಧತೆಯನ್ನು ಪ್ರದರ್ಶಿಸಿದೆ.

ಈ ಸಾಧನೆಗಳು ಭಾರತೀಯ ಹಡಗು ನಿರ್ಮಾಣ ಕ್ಷೇತ್ರದ ಮೇಲೆ ಅಂತರರಾಷ್ಟ್ರೀಯ ಹಡಗು ಮಾಲೀಕರಿಗೆ ಇರುವ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತವೆ. ಅತ್ಯಾಧುನಿಕ ಮೂಲಸೌಕರ್ಯ ಮತ್ತು ನುರಿತ ಕಾರ್ಯಪಡೆಯನ್ನು ಹೊಂದಿರುವ ಮಂಗಳೂರು ಪ್ರಾದೇಶಿಕವಾಗಿ ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದೆ. ಭಾರತವನ್ನು ಪ್ರಮುಖ ಜಾಗತಿಕ ಹಡಗು ನಿರ್ಮಾಣ ತಾಣವನ್ನಾಗಿ ಮಾಡುವ ದೇಶದ ಮಹತ್ವಾಕಾಂಕ್ಷೆಗೆ ಮಂಗಳೂರು ನಗರವು ಇನ್ನುಮುಂದೆ ಅತ್ಯಂತ ಪ್ರಮುಖ ಕೊಡುಗೆ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.

Share News