COMMUNITY NEWSLATEST NEWS

ಕುಟುಂಬಗಳಲ್ಲಿ ನಂಬಿಕೆ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು: ಬಿಷಪ್ ಡಾ| ಪೀಟರ್ ಪೌಲ್ ಸಲ್ಡಾನಾ

ಮಂಗಳೂರು: ಕುಟುಂಬಗಳಲ್ಲಿ ನಂಬಿಕೆಯನ್ನು ಪೋಷಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ದೇವರಿಗೆ ಮೊದಲ ಆದ್ಯತೆ ನೀಡಿದಾಗ ಮಾತ್ರ ಜೀವನದಲ್ಲಿ ನಿಜವಾದ ಸಂತೋಷ ಸಿಗಲು ಸಾಧ್ಯ ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂ| ಡಾ| ಪೀಟರ್ ಪೌಲ್ ಸಲ್ಡಾನಾ ಅಭಿಪ್ರಾಯಪಟ್ಟರು.

ಮಂಗಳೂರು ಧರ್ಮಕ್ಷೇತ್ರದ 2026–2028ನೇ ಅವಧಿಯ ಎರಡನೇ ಧರ್ಮಕ್ಷೇತ್ರದ ಪಾಲನಾ ಪರಿಷತ್ (DPP) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇಂದಿನ ‘ಜೆನ್ ಝಡ್’ (Gen Z), ‘ಜನರೇಷನ್ ಆಲ್ಫಾ’ ಮತ್ತು ‘ಬೀಟಾ’ ಪೀಳಿಗೆಯ ಮಕ್ಕಳಿಗೆ ಪರಿಣಾಮಕಾರಿಯಾಗಿ ಧರ್ಮಶಿಕ್ಷಣ ನೀಡಲು ನುರಿತ ಧರ್ಮಶಿಕ್ಷಕರ ಅಗತ್ಯವಿದೆ. ಮನೆಗಳಲ್ಲಿ ನಂಬಿಕೆಯ ಬುನಾದಿಯನ್ನು ಗಟ್ಟಿಗೊಳಿಸುವ ಕಾರ್ಯ ಇಂದಿನಿಂದಲೇ ಆರಂಭವಾಗಬೇಕು ಎಂದರು.

ಕೌಟುಂಬಿಕ ಸಾಕ್ಷ್ಯ ಮತ್ತು ಸಂವಾದ:“ಸಮಯದ ಅವಶ್ಯಕತೆ: ನಂಬಿಕೆಯಲ್ಲಿ ಆಳವಾಗುವುದು ಮತ್ತು ಮಕ್ಕಳನ್ನು ಧರ್ಮಶಿಕ್ಷಣದ ಕಡೆಗೆ ಪ್ರೇರೇಪಿಸುವಲ್ಲಿ ಪೋಷಕರ ಪಾತ್ರ” ಎಂಬ ಮುಖ್ಯ ವಿಷಯದ ಕುರಿತು ‘ಮಿಷನರಿ ಫ್ಯಾಮಿಲೀಸ್ ಆಫ್ ಕ್ರೈಸ್ಟ್’ (MFC) ಸಂಘಟನೆಯ ದೇರೆಬೈಲ್‌ನ ಜೆಸ್ವಿನ್ ಕ್ಯಾಸ್ಟೆಲಿನೊ – ಲವಿಶಾ ಸಲ್ಡಾನಾ ದಂಪತಿ, ಡಾ. ಪ್ರಿಯತಮ್ ಕಾಮತ್ – ಡಾ. ಲವ್ಲಿ ದಂಪತಿ ಹಾಗೂ ಕುಲಶೇಖರದ ಮೆಲ್ವಿನ್ ಫೆರ್ನಾಂಡಿಸ್ – ನೀತಾ ಫೆರ್ನಾಂಡಿಸ್ ದಂಪತಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಕ್ಕಳಿಗೆ ಗುಣಮಟ್ಟದ ಸಮಯ ನೀಡುವುದು ಮತ್ತು ಮೊಬೈಲ್/ಟಿವಿ (ಸ್ಕ್ರೀನ್) ಸಮಯವನ್ನು ನಿಯಂತ್ರಿಸುವ ಮಹತ್ವವನ್ನು ಇವರು ವಿವರಿಸಿದರು. ಮಕ್ಕಳಾದ ಎಸ್ತರ್ ಫೆರ್ನಾಂಡಿಸ್ ಮತ್ತು ಜೊವಾನ್ನಾ ಕ್ಯಾಸ್ಟೆಲಿನೊ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದೇರೆಬೈಲ್ ಚರ್ಚ್‌ನ ಪ್ರಧಾನ ಗುರು ವಂ| ಫಾ| ಜೋಸೆಫ್ ಮಾರ್ಟಿಸ್ ಸಂವಾದ ನಿರ್ವಹಿಸಿದರು.ಇದೇ ವೇಳೆ ವಂ| ಫಾ| ನವೀನ್ ಪಿಂಟೊ ಅವರು ನೂತನ ಸಿನೊಡಲ್ ಮಾರ್ಗದ ಕುರಿತ ಸಮೀಕ್ಷೆಯನ್ನು ಪರಿಚಯಿಸಿದರು ಹಾಗೂ ವಂ| ಫಾ| ವಿನೋದ್ (ಕಪುಚಿನ್) ಅವರು ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮಾಹಿತಿ ನೀಡಿದರು.ಸಾಧಕರು ಮತ್ತು ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ:ಅಂತಾರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ಸಮುದಾಯದ ಸಾಧಕರನ್ನು ಬಿಷಪ್ ಸನ್ಮಾನಿಸಿದರು.• ಗಿನ್ನೆಸ್ ವಿಶ್ವ ದಾಖಲೆ: ‘ಪೊಯ್ಲೊ ವಿಶ್ವ ಕೊಂಕಣಿ ಸಂಗೀತ ಮಹಾಮೇಳ’ದ ಸುದೀರ್ಘ ಗಾಯನ ಮ್ಯಾರಥಾನ್‌ಗಾಗಿ ಗಿನ್ನೆಸ್ ದಾಖಲೆ ಪ್ರಮಾಣಪತ್ರ ಸ್ವೀಕರಿಸಿದ ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ. “ಲುವಿ” ಪಿಂಟೊ.• ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ: ರೋಶನ್ ಅಲೆಕ್ಸಾಂಡರ್ ಪಿಂಟೊ (ಲೊರೆಟ್ಟೊ).
• ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ: ಪ್ರವೀಣ್ ಕುಟಿನ್ಹೊ (ಬೋಂದೆಲ್), ರೊನಾಲ್ಡ್ ಡಿ’ಸೋಜಾ (ಮೂಡುಬಿದಿರೆ), ಫ್ಲೇವಿಯಾ ಜಸಿಂತಾ ಮಿರಾಂಡಾ (ಕೊರ್ಡೆಲ್).• ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಬಬಿತಾ ಡಿ’ಸೋಜಾ, ರೀಟಾ ಮರಿಯಾ ಮೆನೆಜಸ್, ಅರುಣ್ ಬ್ಯಾಪ್ಟಿಸ್ಟ್, ಜಾಯ್ ಮಸ್ಕರೇನಸ್, ಕೊಂಕಣಿ ನಾಟಕ ಸಭಾ, ರಿಶಲ್ ಮೆಲ್ಬಾ ಕ್ರಾಸ್ತಾ, ವಂ| ಫಾ| ಪ್ರವೀಣ್ ಮಾರ್ಟಿಸ್ ಎಸ್.ಜೆ., ವಿನ್ಸೆಂಟ್ ಪಿಂಟೊ, ಮಾರಿಸ್ ಮೊಂತೇರೊ, ಎಮಿಲ್ಡಾ ಆಲಿಸ್ ಡಿ’ಸೋಜಾ ಮತ್ತು ಜೆಸ್ನಿಯಾ ಕೊರೆಯಾ. ಗೌರವಿಸಲಾಯಿತು.ವೇದಿಕೆಯಲ್ಲಿ ಶ್ರೇಷ್ಠ ಗುರು ಅತಿ ವಂ| ಮೊನ್ಸಿಂಜರ್ ಮ್ಯಾಕ್ಸಿಮ್ ನೊರೊನ್ಹಾ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ| ಫಾ| ರೂಪೇಶ್ ಮಾಡ್ತಾ, ರಾಯ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು. ವಂ| ಫಾ| ರಿಚರ್ಡ್ ಕುವೆಲ್ಲೊ ಪ್ರಾರ್ಥಿಸಿದರು. ಸಂತೋಷ್ ಡಿ’ಕೋಸ್ಟಾ ಮತ್ತು ಡಾ. ಫ್ರೀಡಾ ಡಿ’ಸೋಜಾ ಸನ್ಮಾನ ಪತ್ರ ವಾಚಿಸಿದರು. ಡಿಪಿಪಿ ಕಾರ್ಯದರ್ಶಿ ಉಷಾ ಜೀಟಾ ಫೆರ್ನಾಂಡಿಸ್ ವರದಿ ಮಂಡಿಸಿ, ವಂದಿಸಿದರು.

Share News