ಮಂಗಳೂರು: ಮಂಗಳೂರು ಧರ್ಮಕೇಂದ್ರದ ಪರಿಸರ ಆಯೋಗದ ವತಿಯಿಂದ ಆಯೋಜಿಸ ಲಾಗಿದ್ದ ‘ನಮ್ಮ ಉಳಿವಿಗಾಗಿ ಪ್ರತಿಜ್ಞೆ – 2026’ (Pledge for Our Survival – 2026) ಪರಿಸರ ಜಾಗೃತಿ ಅಭಿಯಾನವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಒಟ್ಟು 1,36,966 ಜನರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಧರ್ಮಕೇಂದ್ರದ ವ್ಯಾಪ್ತಿಯ 125 ಪ್ಯಾರಿಷ್ಗಳು, ವಿವಿಧ ಶಾಲೆಗಳು, ಕಾಲೇಜುಗಳು ಹಾಗೂ ಸಂಸ್ಥೆಗಳ ಕುಟುಂಬಗಳು ಮತ್ತು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಮೆಡಿಕಲ್ ವಿದ್ಯಾರ್ಥಿಗೆ ₹1 ಲಕ್ಷ ನಗದು ಬಹುಮಾನ:ಈ ಅಭಿಯಾನದ ಭಾಗವಾಗಿ ಆಯೋಜಿಸಲಾಗಿದ್ದ ಅದೃಷ್ಟಶಾಲಿ ಉಡುಗೊರೆ ಚೀಟಿ (Lucky Draw) ಎತ್ತುವ ಪ್ರಕ್ರಿಯೆಯು ಸುರತ್ಕಲ್ ಚರ್ಚ್ ಸಭಾಂಗಣ ದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ನಡೆಯಿತು. ಮಂಗಳೂರು ಧರ್ಮ ಕೇಂದ್ರದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ವಿಜೇತರ ಚೀಟಿಯನ್ನು ಎತ್ತಿದರು. ಪಂಜಿಮೊಗರು ನಿವಾಸ ಹಾಗೂ ಕನಾಚೂರು ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅಬ್ದುಲ್ ರಜೀದ್ ₹1 ಲಕ್ಷ ನಗದು ಬಹುಮಾನದ ವಿಜೇತರಾಗಿದ್ದಾರೆ. ಅಕ್ಟೋಬರ್ 26 ರಂದು ಬಿಷಪ್ ಹೌಸ್ನಲ್ಲಿ ರಜೀದ್ ಅವರಿಗೆ ಬಹುಮಾನವನ್ನು ಹಸ್ತಾಂತರಿಸಲಾಯಿತು.ಪ್ರತಿಜ್ಞೆಯ ಪ್ರಮುಖ ಅಂಶಗಳು:ದೈನಂದಿನ ಜೀವನದಲ್ಲಿ ಪರಿಸರ ಕಾಳಜಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನದಲ್ಲಿ ಭಾಗವಹಿಸಿದವರು ಈ ಕೆಳಗಿನ ಪ್ರಮುಖ ಅಂಶಗಳಿಗೆ ಪ್ರತಿಜ್ಞೆ ಮಾಡಿದ್ದರು:• ಕತ್ತರಿಸುವ ಪ್ರತಿ ಒಂದು ಮರಕ್ಕೆ ಮೂರು ಸಸಿಗಳನ್ನು ಕಡ್ಡಾಯವಾಗಿ ನೆಡುವುದು.
• ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಒಣ-ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸುವುದು.
• ನೀರು ಮತ್ತು ವಿದ್ಯುತ್ ಅನ್ನು ಮಿತವಾಗಿ ಬಳಸಿ ಸಂರಕ್ಷಿಸುವುದು.
• ವಸ್ತುಗಳ ಮರುಬಳಕೆ (Reuse & Recycle) ಮಾಡುವುದು.
• ವಾಯು ಮಾಲಿನ್ಯ ತಡೆಗೆ ಸಾರ್ವಜನಿಕ ಸಾರಿಗೆ ಅಥವಾ ಕಾರ್ಪೂಲಿಂಗ್ ವ್ಯವಸ್ಥೆ ಬಳಸುವುದು.
• ಶಬ್ದ ಮಾಲಿನ್ಯ ನಿಯಂತ್ರಿಸುವುದು, ಪ್ರಾಣಿ-ಪಕ್ಷಿಗಳನ್ನು ರಕ್ಷಿಸುವುದು ಹಾಗೂ ಆಹಾರ ಪೋಲಾಗದಂತೆ ತಡೆಯುವುದು.ಈ ವಿಶೇಷ ಅಭಿಯಾನಕ್ಕೆ ಧರ್ಮಕೇಂದ್ರದ ಯುವಜನ ಆಯೋಗ ಮತ್ತು ಶಿಕ್ಷಣ ಆಯೋಗಗಳು ಸಂಪೂರ್ಣ ಸಹಕಾರ ನೀಡಿದ್ದವು.ಸುರತ್ಕಲ್ ಚರ್ಚ್ನಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸುರತ್ಕಲ್ ಚರ್ಚ್ನ ಪ್ರಧಾನ ಧರ್ಮಗುರು ಫಾ. ಆಸ್ಟಿನ್ ಪೆರಿಸ್, ಧರ್ಮಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು. ಪರಿಸರ ಆಯೋಗದ ಕಾರ್ಯದರ್ಶಿ ಹಾಗೂ ಅಭಿಯಾನದ ಸಂಚಾಲಕ ಲೂಯಿಸ್ ಪಿಂಟೋ ಅವರು ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರಲ್ಲಿ ಪರಿಸರ ಜವಾಬ್ದಾರಿಯನ್ನು ಹೆಚ್ಚಿಸಲು ಪರಿಸರ ಆಯೋಗವು ಇಂತಹ ವಾರ್ಷಿಕ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ.
