ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡ ಅಂತರಾಷ್ಟ್ರೀಯ ಜೂನಿಯರ್ ಚೇಂಬರ್ (ಜೆಸಿಐ) ವಲಯ 15 ರ ‘ಆರ್ಯ’ ನಾಮಾಂಕಿತ 2026ರ ಭವ್ಯ ವಲಯ ಸಮ್ಮೇಳನವು ಅಕ್ಟೋಬರ್ 31ಮತ್ತು ನವೆಂಬರ್ 1 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ನ ವಿ.ಕೆ. ಶೆಟ್ಟಿ ಅಡಿಟೋರಿಯಂನಲ್ಲಿ ನಡೆಯಲಿದೆ. ಜೆಸಿಐ ವಿಟ್ಲ ಹಾಗೂ ತುಂಬೆ ಎಲೈಟ್ ಘಟಕಗಳು ಈ ಬಾರಿಯ ಸಮ್ಮೇಳನದ ಆತಿಥ್ಯ ವಹಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿವಸದ ಸಮಾರಂಭದಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸಂಜೆ, ಪ್ರಶಸ್ತಿ ಪ್ರದಾನ, ವಿವಿಧ ಘಟಕಗಳ ಸಾಧನೆಗಳಿಗೆ ಮನ್ನಣೆ, ಮುಂದಿನ ವಲಯಾಧ್ಯಕ್ಷರ ಚುನಾವಣೆ ಮೊದಲಾದವುಗಳು ನಡೆಯಲಿವೆ.
ಉದ್ಘಾಟನಾ ಸಮಾರಂಭದಲ್ಲಿ ಜೆಸಿಐ ವಲಯಾಧ್ಯಕ್ಷರಾದ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ವಿಶೇಷ ಅತಿಥಿಯಾಗಿರುವರು. ರಾಷ್ಟ್ರೀಯ ಜೆಸಿಐ ಯ ಆಡಳಿತ ಸಮಿತಿ ಸದಸ್ಯ ವೈ. ಸುಕುಮಾರ್ ಉದ್ಘಾಟಿಸುವರು. ಇದೇ ಸಂದರ್ಭ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಸೌದಿ ಅರೇಬಿಯಾದ ‘ಅಲ್ ಮುಝೈನ್’ ಸಂಸ್ಥೆಯ ಮುಖ್ಯಸ್ಥರು, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಚೆಯರ್ಮೆನ್ ಝಕರಿಯ ಜೋಕಟ್ಟೆ ಅವರಿಗೆ ನೀಡಲಾಗುವುದು. ಪೂರ್ವ ವಲಯಾಧ್ಯಕ್ಷ ಸಂಪತ್ ಬಿ. ಸುವರ್ಣ, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಇಶಾನ್ ಆರ್. ಅಗರ್ವಾಲ್, ನಿಕಟಪೂರ್ವ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಹಾಗೂ ಜೆ.ಎ.ಸಿ. ವಲಯಾಧ್ಯಕ್ಷ ಜಬ್ಬಾರ್ ಸಾಹೇಬ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಮ್ಮಿ ಲೈನ್ ಡ್ಯಾನ್ಸ್ ಅಕಾಡೆಮಿಯ ಅಂತರಾಷ್ಟ್ರ ಕಲಾವಿದರಾದ ಶೆರಲೈನ್ ಸಿಕ್ವೇರಾ ಮತ್ತು ತಂಡದಿಂದ ಸಾಂಸ್ಕೃತಿಕ ಸಂಜೆ ನಡೆಯಲಿದೆ. ವಿವಿಧ ಎಕ್ಸ್’ಪೋ ಪ್ರದರ್ಶನ ಏರ್ಪಡಿಸಲಾಗಿದೆ. ಸುಮಾರು ಒಂದು ಸಾವಿರ ಜೇಸಿ ಸದಸ್ಯರು ಎರಡು ದಿವಸ ಭಾಗವಹಿಸಲಿದ್ದಾರೆ. ಸಮ್ಮೇಳನದ ಸಂಪೂರ್ಣ ಸಿದ್ಧತೆಗಾಗಿ ಅದರ ನಿರ್ದೇಶಕರಾಗಿ ಜೆಸಿಐ ವಿಟ್ಲದ ಪೂರ್ವಾಧ್ಯಕ್ಷ ರಶೀದ್ ವಿಟ್ಲ ಕಾರ್ಯಪ್ರವೃತ್ತರಾಗಿದ್ದಾರೆ. ಆತಿಥ್ಯ ಘಟಕದ ಅಧ್ಯಕ್ಷ ಸಂದೀಪ್ ಹಾಗೂ ಸಹ ಆತಿಥ್ಯ ಘಟಕದ ಅಧ್ಯಕ್ಷೆ ಸಮತಾ ಕಿಶೋರ್ ಸಹಕರಿಸುತ್ತಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೇಸಿಐ ವಲಯ 15ರಲ್ಲಿ 60 ಘಟಕಗಳಲ್ಲಿ 6,000 ಸದಸ್ಯರಿದ್ದಾರೆ. ತರಬೇತಿ ಮೂಲಕ ವ್ಯಕ್ತಿತ್ವ ವಿಕಸನ ಒಟ್ಟಿಗೆ ನಾಯಕತ್ವ ಗುಣ ಬೆಳೆಸುವುದೇ ಜೆಸಿಐ ಸಂಸ್ಥೆಯ ಮೂಲ ಉದ್ದೇಶ. 2026 ರಲ್ಲಿ 1,200ಮಿಕ್ಕಿ ತರಬೇತಿಗಳು ವಿವಿಧ ಶಾಲಾ, ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗಿದೆ.
ಪ್ಲಾಸ್ಟಿಕ್ ಬಾಟಲ್ ಮುಕ್ತ ಭಾರತದ ಕನಸಿಗೆ ಪೂರಕವಾಗಿ ಸಮಾಜಕ್ಕೆ ಸುಮಾರು 10,000 ಸ್ಟೀಲ್ ಬಾಟಲ್ ವಿತರಣೆ ಮಾಡಲಾಗಿದೆ. ‘ಕಮ್ಯುನಿಟಿ ಇಂಪಾಕ್ಟ್’ ಕಾರ್ಯಕ್ರಮದ ಅಡಿಯಲ್ಲಿ ಮನೆ ಇಲ್ಲದವರಿಗೆ ಮನೆ, ಬಸ್ ಶೆಲ್ಟರ್, ಹಾಸ್ಪಿಟಲ್ಗಳಿಗೆ ಪರೀಕ್ಷಾ ಮಷೀನ್, ವೀಲ್ ಚೈರ್ಸ್, ಅನೇಕ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊಡುಗೆಯನ್ನು ಹಸ್ತಾಂತರಿಸಲಾಗಿದೆ. 2000ಯೂನಿಟ್ ರಕ್ತ ದಾನ ಮಾಡಲಾಗಿದೆ.
‘ಕಾಬಿಲ್’ ಕಾರ್ಯಕ್ರಮ ಅಡಿಯಲ್ಲಿ ಮಹಿಳೆಯರಿಗೆ ಸ್ವಾಲಂಬನೆ ಬದುಕಿಗೆ ವಿವಿಧ ತರಬೇತಿ ಕಾರ್ಯಕ್ರಮ, 3 ಜಿಲ್ಲೆಯ ಆಯ್ಕೆ ಮಾಡಿದ ಶಾಲಾ ಮಕ್ಕಳಿಗೆ ವಿವಿಧ ಪರೀಕ್ಷೆಗಳು, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಶೀಲತೆ ಹಾಗೂ ವ್ಯವಹಾರ ಅಭಿವೃದ್ದಿಗೆ ‘ಜೇಕಾಂ ಟೇಬಲ್’, ಪ್ರತಿ ಸದಸ್ಯತನದ ಮೇಲೆ ವೆಲ್ಫೇರ್ ಫಂಡ್ ಅಡಿಯಲ್ಲಿ ‘ಡೆತ್ ಬೆನಿಫಿಟ್ ಕವರೇಜ್’, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಾ ತರಬೇತುದಾರರನ್ನು ರೂಪಿಸುವುದು, ವಾರ್ಷಿಕವಾಗಿ 150 ಮಕ್ಕಳಿಗೆ ಶಾಶ್ವತ ಸ್ಕಾಲರ್ಷಿಪ್ ವಿತರಣೆ, ವಾರ್ಷಿಕವಾಗಿ ಆರೇಳು ಬೇರೆ ಬೇರೆ ಸಮ್ಮೇಳನಗಳನ್ನು ಮಾಡುತ್ತ ನಾಯಕತ್ವ ಅವಕಾಶ ಸೃಷ್ಟಿಸುವುದು, ಘಟಕ ಮಟ್ಟದಲ್ಲಿ ಬೇರೆ ಬೇರೆ ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ಕಾಲರ್ಷಿಪ್ ವಿತರಣೆ ಮೊದಲಾದ ಸಮಾಜಮುಖಿ ಸೇವೆಗಳು ಜೆಸಿಐ ವಲಯ 15 ರಿಂದ ಈ ವರ್ಷ ನೆರವೇರಿಸಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಸಂತೋಷ್ ಶೆಟ್ಟಿ ವಲಯಾಧ್ಯಕ್ಷರು, ರಶೀದ್ ವಿಟ್ಲ ಸಮ್ಮೇಳನ ನಿರ್ದೇಶಕರು, ಸಂದೀಪ್ ಅಧ್ಯಕ್ಷರು ಜೆಸಿಐ ವಿಟ್ಲ, ಲೂವಿಸ್ ಮಸ್ಕರೇಞಸ್ ವಲಯಾಧ್ಯಕ್ಷರ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.
