canaratvnews

ಲಕ್ಕಿ ಸ್ಕೀಂ- 13 ಸಾವಿರ ಮಂದಿಗೆ 15 ಕೋ.ರೂ ವಂಚನೆ: ನಾಲ್ವರ ಬಂಧನ

ಮಂಗಳೂರು: ಸುರತ್ಕಲ್‌ ವ್ಯಾಪ್ತಿಯಲ್ಲಿ ಲಕ್ಕಿ ಸ್ಕೀಮ್‌ಗಳ ಮೂಲಕ ಗ್ರಾಹಕರಿಗೆ ನಾನಾ ರೀತಿಯ ಬಹುಮಾನಗಳ ಆಮಿಷ ತೋರಿಸಿ 15ಸಾವಿರ ಮಂದಿಗೆ 15ಕೋಟಿ ರೂ.ಗೂ ಮಿಕ್ಕಿ ಹಣ ಸಂಗ್ರಹ ಮಾಡಿ ಬಳಿಕ ವಂಚನೆಗೈದ ಪ್ರತ್ಯೇಕ ಎರಡು ಪ್ರಕರಣದಲ್ಲಿ ನಾಲ್ವರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ನ್ಯೂ ಶೈನ್‌ ಎಂಟರ್‌ ಪ್ರೈಸಸ್‌ ಎಂಬ ಲಕ್ಕಿ ಸ್ಕೀಮ್‌ನಲ್ಲಿವಂಚನೆ ಮಾಡಿದ್ದ ಕಾಟಿಪಳ್ಳ ಒಂದನೇ ಬ್ಲಾಕ್‌ನ ಮಹಾಕಾಳಿ ದೈವಸ್ಥಾನದ ಬಳಿಯ ನಿವಾಸಿ ಅಹಮ್ಮದ್‌ ಖುರೇಶಿ (34), ಕಾಟಿಪಳ್ಳ ಎರಡನೇ ಬ್ಲಾಕ್‌ನ ಕೋರ್ದಬ್ಬು ದ್ವಾರದ ನಝೀರ್‌ ನಾಸೀರ್‌ (39) ಹಾಗೂ ನ್ಯೂ ಇಂಡಿಯಾ ರಾಯಲ್‌ ಸ್ಕೀಮ್‌ ಗ್ರೀನ್‌ ಲೈಟ್‌ ಲಕ್ಕಿ ಸ್ಕೀಮ್‌ನಲ್ಲಿವಂಚನೆ ಮಾಡಿದ್ದ ಬಜಪೆಯ ಮೊಹಮ್ಮದ್‌ ಅಶ್ರಫ್‌ (43) ಹಾಗೂ ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹನೀಫ್‌ (50) ಬಂಧಿತರು.

ನ್ಯೂ ಇಂಡಿಯಾ ರಾಯಲ್‌ ಸ್ಕೀಮ್‌ ಮತ್ತು ಗ್ರೀನ್‌ ಲೈಟ್‌ ಲಕ್ಕಿ ಸ್ಕೀಮ್‌ ಎಂಬ ಲಕ್ಕಿ ಸ್ಕೀಮ್‌ನಲ್ಲಿಆರೋಪಿಗಳು ವ್ಯವಹಾರ ನಡೆಸುತ್ತಿದ್ದರು. ಪ್ರತೀ ತಿಂಗಳು 1ಸಾವಿರ ರೂ.ನಂತೆ 1 ವರ್ಷದ ಅವಧಿಗೆ ನಗದು ಸ್ವೀಕರಿಸಿ ಪ್ರತಿ ತಿಂಗಳು ಲಕ್ಕಿ ಸ್ಕೀಮ್‌ ಹೆಸರಿನಲ್ಲಿಆಕರ್ಷಕ ಬಹುಮಾನ ಆಮಿಷ ತೋರಿಸಿ ಸುಮಾರು 13ಸಾವಿರ ಗ್ರಾಹಕರಿಂದ 10 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದರು. ಇದಾದ ಬಳಿಕ ಕಾಟಿಪಳ್ಳ 2ನೇ ಬ್ಲಾಕ್‌ ಸಂಶುದ್ದೀನ್‌ ಎಂಬಾತ ಸರ್ಕಲ್‌ ಬಳಿಯ ಬಿಎಂಆರ್‌ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಚೇರಿಯನ್ನು ಏಕಾಏಕಿಯಾಗಿ ಬಂದ್‌ ಮಾಡಿ ಸಾರ್ವಜನಿಕರಿಗೆ ವಂಚಿಸಿದ್ದ. ಸ್ಕೀಮ್‌ ದಂಧೆಕೋರರು ನಂಬಿಕೆ ದ್ರೋಹ ಮಾಡಿದ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಸುರತ್ಕಲ್‌ ಪೊಲೀಸರು ಆರೋಪಿಗಳ ಪೊಲೀಸ್‌ ಕಸ್ಟಡಿ ಬಳಿಕ ಆ.19ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಸದ್ರಿ ಆರೋಪಿತರು ಈ ಹಿಂದೆ ಮಾಡಿದ ನ್ಯೂ ಇಂಡಿಯಾ ಪ್ರೀಮಿಯಂ ಸ್ಕೀಮ್‌ ಮತ್ತು ನ್ಯೂ ಇಂಡಿಯಾ ಬಂಪರ್‌ ಸ್ಕೀಮ್‌ಗಳನ್ನು ಸಹ ತನಿಖೆ ಮಾಡಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜೊತೆಗೆ ನ್ಯೂ ಶೈನ್‌ ಎಂಟರ್‌ಪ್ರೈಸಸ್‌ ಎಂಬ ಲಕ್ಕಿ ಸ್ಕೀಮ್‌ನಲ್ಲಿ9 ತಿಂಗಳು 1 ಸಾವಿರ ರೂ. ಪಾವತಿಸಿ ಕೊನೆಯ 2 ತಿಂಗಳು 1500 ರೂ. ಹೀಗೆ ಒಟ್ಟು 11 ತಿಂಗಳ ಅವಧಿಗೆ ಹಣ ಸ್ವೀಕರಿಸಿದ್ದರು. ಲಕ್ಕಿ ಸ್ಕೀಮ್‌ ಹೆಸರಲ್ಲಿಆಕರ್ಷಕ ಹಾಗೂ ಬಂಪರ್‌ ಬಹುಮಾನ ಕಾರು, ಬೈಕ್‌, ಫ್ಲ್ಯಾಟ್‌, ಚಿನ್ನ ಕೊಡುವುದಾಗಿ ನಂಬಿಸಿದ್ದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಸುಮಾರು 3 ಸಾವಿರ ಮಂದಿಗೆ ಸ್ಕೀಮ್‌ ಮುಗಿದ ಬಳಿಕ ಬಹುಮಾನ ಅಥವಾ ಕಟ್ಟಿದ ಹಣವನ್ನೂ ನೀಡದೆ 4.20 ಕೋಟಿ ರೂ. ಅಧಿಕ ವಂಚನೆ ಮಾಡಿದ್ದಾರೆ. ಈ ಬಗ್ಗೆ ಸೂರಿಂಜೆಯ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಆ.25ರ ತನಕ ಪೊಲೀಸ್‌ ಕಸ್ಟಡಿಗೆ ಪಡೆದಿದ್ದಾರೆ. ಇವರು ಈ ಹಿಂದೆ ನಡೆಸಿದ ಲಕ್ಕಿ ಸ್ಕೀಮ್‌ನ ಯೋಜನೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ.

ಆರೋಪಿತರ ಪೈಕಿ ಅಹಮ್ಮದ್‌ ಖುರೇಶಿ ಮೇಲೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ2 ಕೊಲೆ ಯತ್ನ ಪ್ರಕರಣಗಳು ಮತ್ತು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಒಂದು ಪ್ರಕರಣ ದಾಖಲಾಗಿದೆ. ಆರೋಪಿ ನಝೀರ್‌ ಯಾನೇ ನಾಸೀರ್‌ ಮೇಲೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಮಾರ್ಗದರ್ಶನ, ಡಿಸಿಪಿಗಳಾದ ಮಿಥುನ್‌ ಮತ್ತು ರವಿಶಂಕರ್‌, ಎಸಿಪಿ ಶ್ರೀಕಾಂತ್‌ ನಿರ್ದೇಶನದಲ್ಲಿ ಸುರತ್ಕಲ್‌ ಠಾಣೆ ಪೊಲೀಸ್‌ ನಿರೀಕ್ಷಕ ಪ್ರಮೋದ್‌ ಕುಮಾರ್‌ ಪಿ. ನೇತೃತ್ವದಲ್ಲಿಠಾಣೆ ಪೊಲೀಸ್‌ ಉಪ ನಿರೀಕ್ಷಕರಾದ ರಘುನಾಯಕ, ರಾಘವೇಂದ್ರ ನಾಯ್‌್ಕ, ಜನಾರ್ಧನ ನಾಯ್‌್ಕ, ಶಶಿಧರ ಶೆಟ್ಟಿ, ಎಎಸ್‌ಐ ತಾರನಾಥ, ರಾಜೇಶ್‌ ಆಳ್ವ ಹಾಗೂ ಸಿಬ್ಬಂದಿ ರಾಜೇಂದ್ರ ಪ್ರಸಾದ್‌, ಧನಂಜಯ ಮೂರ್ತಿ, ಅಜಿತ್‌ ಮ್ಯಾಥ್ಯೂ, ತಿರುಪತಿ, ಕಾರ್ತಿಕ್‌, ವಿನೋದ್‌ ಕುಮಾರ್‌, ಸಂಜೀವ ಕುಮಾರ್‌, ಓಂಪ್ರಕಾಶ್‌ ಬಿಂಗಿ, ಮಂಜುನಾಥ ಆಯಟ್ಟಿ ಕಾರ್ಯಾಚರಣೆ ನಡೆಸಿದ್ದರು.

ಮೋಸಹೋದವರು ಠಾಣೆಗೆ ಹೇಳಿಕೆ ನೀಡುವಂತೆ ಸೂಚನೆ

ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಬೋಳೂರು ಗ್ರಾಮದ ಮನೆ, ಬಜಪೆಯಲ್ಲಿರುವ ಮನೆ, ಬಜಪೆ ತಾರಿಕಂಬ್ಳದಲ್ಲಿರುವ 5 ಫ್ಲ್ಯಾಟ್‌ಗಳು, ಕಚೇರಿಯಲ್ಲಿದ್ದ ಕಂಪ್ಯೂಟರ್‌ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾಯಿದೆಯಂತೆ ಆರೋಪಿತರು ಲಕ್ಕಿ ಸ್ಕೀಮ್‌ ನ ಹಣದಲ್ಲಿಖರೀದಿಸಿದ ಮನೆ, ನಿವೇಶನ, ಫ್ಲ್ಯಾಂಟ್‌ ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಜಿಲ್ಲಾಧಿಕಾರಿಗೆ, ಉಪ ವಿಭಾಗ ದಂಡಾಧಿಕಾರಿಗೆ ಹಾಗೂ ಕಂದಾಯ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿದೆ. ದಾಖಲೆ ಸಹಿತ ಠಾಣೆಗೆ ಮಾಹಿತಿ ನೀಡಿ: ಲಕ್ಕಿ ಸ್ಕೀಮ್‌ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್‌ ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆ ನೀಡಲು ಸೂಚಿಸಲಾಗಿದೆ.

Share News
Exit mobile version