ಶಿವಮೊಗ್ಗ: ಕರಾವಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ವರುಣನ ಈ ಅವಾಂತರಕ್ಕೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ತಡರಾತ್ರಿ 2:30 ವೇಳೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ ಎನ್ನಲಾಗಿದ್ದು, ಗುಡ್ಡದ ಕೆಳಭಾಗದಲ್ಲಿ ಶಡ್ ನಿರ್ಮಾಣ ಮಾಡಿಕೊಂಡು ಕುಟುಂಬ ವಾಸವಿತ್ತು ಎನ್ನಲಾಗಿದೆ. ಘಟನೆಯಲ್ಲಿ ಪಕ್ಕದ ಶೆಡ್ನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ.

ಮೃತರನ್ನು ಮಲ್ಲಿಕಾರ್ಜುನ (35), ನಾಗವೇಣಿ (28), ಸಂತೋಷ (3) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ. ಮಣ್ಣಿನಡಿ ಸಿಲುಕಿ ಮೂವರೂ ಪ್ರಾಣ ಕಳೆದುಕೊಂಡಿದ್ದು, ಶವಗಳನ್ನು ಹೊರ ತೆಗೆಯಲು ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
