ಬೆಳ್ತಂಗಡಿ: ತಾಲೂಕಿನ ಗುರುವಾಯನ ಕೆರೆಯಲ್ಲಿರುವ ಎಕ್ಸೆಲ್ ಕಾಲೇಜಿನ 19ರ ಹರೆಯದ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣದ ವಿವರ
ಜು.31 ರಂದು ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಕಾಲೇಜಿನ ಹುಡುಗರ ಹಾಸ್ಟೆಲ್‌ನಲ್ಲಿದ್ದ ಮದನ್ ರೆಡ್ಡಿ ಎಂಬ ಹುಡುಗ ಸುಮಾರು 11-40 ಗಂಟೆಗೆ ವಾರ್ಡನ್ ಬಳಿ ಬಂದು ನನಗೆ ಹೊಟ್ಟೆನೋವು ಬಂದು ವಾಂತಿ ಆಗುತ್ತಿದೆ, ವಿಶ್ರಾಂತಿ ಬೇಕು ಎಂದು ಕೇಳಿದ್ದಾರೆ. ಪ್ರಾಂಶುಪಾಲರ ಅನುಮತಿ ಮೇರೆಗೆ ವಿಶ್ರಾಂತಿ ಕೊಠಡಿಗೆ ತೆರಳುವಂತೆ ಸೂಚಿಸಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ವಾರ್ಡನ್ ವಿಶ್ರಾಂತಿ ಕೊಠಡಿಗೆ ಹೋಗಿ ನೋಡಿದಾಗ ಅಲ್ಲಿ ಮದನ್ ರೆಡ್ಡಿ ಇರದೇ ಇದ್ದು,
ನಂತರ ನೇರ ಆತನ ವಸತಿ ನಿಲಯದ ಕೊಠಡಿ ಸಂಖ್ಯೆ 110 ರ ಕೋಣೆಯ ಬಳಿ ಹೋದಾಗ ಬಾಗಿಲು ಮುಚ್ಚಿತ್ತು. ಇಲ್ಲಿನ ಹಾಸ್ಟೆಲ್ ನ ವಿದ್ಯಾರ್ಥಿಗಳು ಮಲಗುವ ಯಾವುದೇ ಕೋಣೆಗಳಿಗೆ ಒಳಗಿನಿಂದ ಚಿಲಕ ಇರುವುದಿಲ್ಲ. ಆದ್ದರಿಂದ ಅನುಮಾನಗೊಂಡು ಬಾಗಿಲು ದೂಡಿದಾಗ, ಬಾಗಿಲು ಸ್ವಲ್ಪ ತೆರೆದುಕೊಂಡಿದ್ದು, ಬಾಗಿಲಿಗೆ ಅಡ್ಡವಾಗಿ ಗೋದ್ರೇಜನ್ನು ಇಟ್ಟಿದ್ದು,
ಒಳಗೆ ನೋಡಿದಾಗ ಮದನ್ ರೆಡ್ಡಿ ಬಟ್ಟೆಯನ್ನು ಒಣಗಲು ಹಾಕಿದ್ದ ನೈಲಾನ್ ದಾರವನ್ನು ಕೋಣೆಯ ಸೀಲಿಂಗ್ ಫ್ಯಾನಿಗೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಈ ವಿಚಾರವನ್ನು ವಾರ್ಡನ್ ಪ್ರಾಂಶುಪಾಲರಿಗೆ ತಿಳಿಸಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಯುಡಿಆರ್ ನಂ 41/2026 ಕಲಂ: 194 ಬಿ. ಎನ್. ಎಸ್ ಎಸ್ -2023. ಯಂತೆ ಪ್ರಕರಣ ದಾಖಲಾಗಿರುತ್ತದೆ.
