LATEST NEWS

ವೇದವ್ಯಾಸ್ ಕಾಮತ್ ಅವರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು?: ಶ್ವೇತಪತ್ರ ಹೊರಡಿಸಿ ಚರ್ಚೆಗೆ ಬನ್ನಿ ಎಂದು ಎಸಿ ವಿನಯ್ ರಾಜ್ ಸವಾಲು!

ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರು ತಮ್ಮ ವೈಫಲ್ಯ ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬೀದಿ ನಾಟಕ ಮಾಡುತ್ತಿದ್ದಾರೆ. ಆದರೆ ಮಂಗಳೂರಿನ ಜನರು ಮೂರ್ಖರಲ್ಲ ಎಂದು ಕೆಪಿಸಿಸಿ ವಕ್ತಾರರಾದ ಎ.ಸಿ. ವಿನಯರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಕಾಮತ್ ಅವರು ಮಂಗಳೂರಿಗೆ ತಂದಿರುವ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ, ನಾವು ಅವರೊಂದಿಗೆ ನೇರಾನೇರ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.8 ವರ್ಷಗಳಿಂದ ನೀವೇ ಶಾಸಕರಾಗಿದ್ದರೂ ರಸ್ತೆಗಳು ಯಾಕೆ ಅಭಿವೃದ್ಧಿಯಾಗಿಲ್ಲ?”2019ರಿಂದ 2025ರವರೆಗೆ ರಾಜ್ಯದಲ್ಲಿ ಬಿಜೆಪಿ ಆಡಳಿತವಿತ್ತು. ಕಳೆದ 8 ವರ್ಷಗಳಿಂದ ದಕ್ಷಿಣ ಕ್ಷೇತ್ರದಲ್ಲಿ ಇವರೇ ಶಾಸಕರಾಗಿದ್ದಾರೆ. ಡಬಲ್ ಇಂಜಿನ್ ಸರಕಾರದ ಶಕ್ತಿ ಇವರ ಕೈಯಲ್ಲೇ ಇದ್ದಾಗ ಮಂಗಳೂರು ನಗರದ ರಸ್ತೆಗಳನ್ನು ಯಾಕೆ ಇವರಿಗೆ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ? ಶಾಸಕರು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದರೆ ಇಂದು ಹಾದಿ ಬೀದಿಯಲ್ಲಿ ಇಂತಹ ಪ್ರಹಸನ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ” ಎಂದು ವಿನಯರಾಜ್ ಆಕ್ರೋಶ ಹೊರಹಾಕಿದರು. ಕದ್ರಿ ಶಿವಭಾಗ್ ವಾರ್ಡ್‌ನಲ್ಲಿ ಇವರದ್ದೇ ಪಕ್ಷದ ಕಾವ್ಯ ನಟರಾಜ್ ಕಾರ್ಪೊರೇಟರ್ ಆಗಿದ್ದಾಗ ಶಾಸಕರು ಯಾಕೆ ಮಾತನಾಡಲಿಲ್ಲ, ಈಗ ಯಾಕೆ ನಾಟಕ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರದಿಂದ ಹರಿದು ಬಂದ ಅನುದಾನದ ಲೆಕ್ಕ ಬಿಚ್ಚಿಟ್ಟ ವಿನಯರಾಜ್ರಾಜ್ಯ ಕಾಂಗ್ರೆಸ್ ಸರ್ಕಾರ ಮಂಗಳೂರು ಮಹಾನಗರ ಪಾಲಿಕೆಗೆ ಅನುದಾನ ಬಿಡುಗಡೆ ಮಾಡಲು ಯಾವುದೇ ಹಿಂಜರಿಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸರಕಾರ ನೀಡಿರುವ ಅನುದಾನದ ವಿವರಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟರು:• ರೂ. 145 ಕೋಟಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪಾಲಿಕೆಗೆ ಬಿಡುಗಡೆಯಾದ ಮೊತ್ತ.
• ರೂ. 25 ಕೋಟಿ: ಪ್ರತಿ ಶಾಸಕರಿಗೆ ಲಭ್ಯವಿರುವ ಅನುದಾನ.
• ರೂ. 15 ಕೋಟಿ: ನೈಸರ್ಗಿಕ ವಿಕೋಪದಡಿಯ ಪರಿಹಾರ ನಿಧಿ.
• ರೂ. 10 ಕೋಟಿ: 15ನೇ ಹಣಕಾಸು ಆಯೋಗದಡಿ ಬಂದಿರುವ ಅನುದಾನ.
• ರೂ. 5 ಕೋಟಿ: ರಾಜ್ಯ ಹಣಕಾಸು ಆಯೋಗದಿಂದ ಬಿಡುಗಡೆಯಾದ ಮೊತ್ತ.
• ರೂ. 400 ಕೋಟಿ: ಇತ್ತೀಚೆಗೆ ಮಂಗಳೂರಲ್ಲಿ ನಡೆದ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವകുಮಾರ್ ಅವರು ಘೋಷಿಸಿದ ವಿಶೇಷ ಅನುದಾನ.ಸದ್ಯ ಮಂಗಳೂರಿನಲ್ಲಿ ಒಟ್ಟು 645 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಘೋಷಣೆಯಾಗಿದ್ದು, ಬಹುಪಾಲು ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಆರಂಭವಾಗುವ ಹಂತದಲ್ಲಿದೆ. ಇಷ್ಟೊಂದು ಕೋಟಿ ಹಣ ಲಭ್ಯವಿದ್ದರೂ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ರಸ್ತೆ ಅಭಿವೃದ್ಧಿ ಮಾಡಲು ಯಾಕೆ ಸಾಧ್ಯವಾಗಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.ದಸರಾ ವ್ಯವಸ್ಥೆ ಶಾಸಕರ ವೈಯಕ್ತಿಕ ಸಾಧನೆಯಲ್ಲ!ಮಂಗಳೂರು ದಸರಾ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಡೆಯುವ ನಗರ ನೈರ್ಮಲ್ಯ ಹಾಗೂ ವಿದ್ಯುದ್ದೀಪಗಳ ಅಲಂಕಾರವು ಎಲ್ಲ ಪಕ್ಷಗಳ ಒಕ್ಕೊರಳ ಒತ್ತಾಯ ಮತ್ತು ಸಹಕಾರದಿಂದ ನಡೆಯುತ್ತದ ಹೊರತು, ಅದು ಶಾಸಕರ ವೈಯಕ್ತಿಕ ಕೊಡುಗೆಯಲ್ಲ. ಅದನ್ನು ತಮ್ಮದೇ ಸಾಧನೆ ಎಂದು ಹೇಳಿಕೊಂಡು ಓಡಾಡುವುದನ್ನು ಶಾಸಕರು ನಿಲ್ಲಿಸಬೇಕು ಎಂದು ವಿನಯರಾಜ್ ಎಚ್ಚರಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಭೀತಿಯಿಂದ ಶಾಸಕರು ಹತಾಶರಾಗಿದ್ದಾರೆ. ಶಾಸಕರೇ, ನಿಮ್ಮ ವೈಫಲ್ಯ ಮುಚ್ಚಿಹಾಕಲು ನಾಟಕ ಮಾಡುವುದನ್ನು ಬಿಟ್ಟು, ಮಂಗಳೂರಿಗೆ ನೀವು ತಂದಿರುವ ಅನುದಾನ ಎಷ್ಟು ಎಂಬುದರ ಕುರಿತು ಶ್ವೇತಪತ್ರ ಹೊರಡಿಸಿ ನೇರಾನೇರ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲಿಯಾನ್, ಸಲೀಮ್, ಅಪ್ಪಿ, ಸಂಶುದ್ದಿನ್, ಅನಿಲ್ ಪೂಜಾರಿ, ಸವಿತಾ ಮಿಸ್ಕಿತ್, ಅಶ್ರಫ್ ಬಜಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share News