LATEST NEWS

ಕದ್ರಿ ಶಿವಭಾಗ್ ರಸ್ತೆ ದುರಸ್ತಿಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ: ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ವಾರ್ಡಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಅದರ ದುರಸ್ತಿಗೆ ಬಿಡಿಗಾಸು ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪಾಲಿಕೆಯ ವಿರುದ್ಧ ಕದ್ರಿ ಶಿವಭಾಗ್ ವಾರ್ಡಿನ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕಾಂಗ್ರೆಸ್ ಸರ್ಕಾರದಿಂದ ಅನುದಾನ ತಡೆ: ಶಾಸಕ ಕಾಮತ್ ಆಕ್ರೋಶ

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು, “ಸಂಪೂರ್ಣ ಹದಗೆಟ್ಟಿರುವ ಈ ರಸ್ತೆಯ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-1 ರಲ್ಲೇ ಅಗತ್ಯ ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ತದನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ರಾಜಕೀಯ ದ್ವೇಷದಿಂದ ಆ ಅನುದಾನವನ್ನು ತಡೆಹಿಡಿದಿದೆ. ಇದರ ಪರಿಣಾಮವಾಗಿ ರಸ್ತೆ ದುರಸ್ತಿಗೊಳ್ಳದೇ ಸ್ಥಳೀಯರು ದಿನನಿತ್ಯ ಸಂಕಷ್ಟ ಎದುರಿಸುವಂತಾಗಿದೆ,” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

“ಈಗಾಗಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಈ ಕುರಿತು ಮನವಿ ಮಾಡಿದರೂ ಅಧಿಕಾರದಲ್ಲಿರುವವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಾರ್ವಜನಿಕರ ನ್ಯಾಯಯುತ ಬೇಡಿಕೆಗೆ ಸದಾ ನನ್ನ ಸಹಮತವಿದ್ದು, ಜನರ ಪರವಾಗಿ ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳಿರುವ ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲೂ ಅಲ್ಲಿನ ಬಿಜೆಪಿ ವತಿಯಿಂದಲೇ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ,” ಎಂದು ಶಾಸಕರು ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತರಾಟೆ:

“ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಮುಗಿದು ಎರಡು ವರ್ಷವಾಗುತ್ತಿದ್ದು, ನಿಕಟಪೂರ್ವ ಪಾಲಿಕೆ ಸದಸ್ಯರ ಕರೆಗಳನ್ನೇ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ. ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿತನ ತೋರಿದರೆ ಸ್ಥಳೀಯ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದಾದರೂ ಹೇಗೆ?” ಎಂದು ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಯನ್ನು ಶಾಸಕರು ಪ್ರಶ್ನಿಸಿದರು.

ಈ ಬೃಹತ್ ಪ್ರತಿಭಟನೆಯಲ್ಲಿ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಾವ್ಯ ನಟರಾಜ್ ಆಳ್ವ, ಮನೋಹರ್ ಶೆಟ್ಟಿ ಕದ್ರಿ, ಶಕೀಲಾ ಖಾವ, ಪ್ರಮುಖರಾದ ವಿಕ್ರಮ್ ಚೌಟ, ಜಯಕುಮಾರ್, ರವಿಚಂದ್ರ, ಪ್ರವೀಣ್ ನಿಡ್ಡೇಲ್, ರಾಮಚಂದ್ರ ಚೌಟ, ಅಶ್ವಿತ್ ಕೊಟ್ಟಾರಿ, ಕಿರಣ್ ದೇವಾಡಿಗ, ರಾಮ್ ಪ್ರಸಾದ್, ನವೀನ್ ಶೆಣೈ, ದೀಪಕ್ ಡಿಸೋಜ, ಟೀನಾ, ಜೆಸೆಲ್, ಕಮಲಾಕ್ಷಿ, ಚರಣ್ ಶೆಟ್ಟಿ, ಪ್ರಶಾಂತ್ ಆಳ್ವ, ವೆಂಕಟೇಶ್, ವರುಣ್ ಅಂಬಟ್, ಋತ್ವಿಕ್ ಕದ್ರಿ, ಆಲ್ವಿನ್, ವಿಜಯ್ ಭಂಡಾರಿ, ಗೋಪಾಲ್, ಯೋಗೀಶ್ ಶೆಣೈ, ಅರ್ಚನಾ ಆಳ್ವ, ಭಾಸ್ಕರ್ ಚಂದ್ರ ಶೆಟ್ಟಿ, ಮಹಾಬಲ ಕುಲಾಲ್, ಪ್ರಶಾಂತ್ ಕಂಕನಾಡಿ, ನಟರಾಜ್ ಆಳ್ವ ಸೇರಿದಂತೆ ನೂರಾರು ಸ್ಥಳೀಯ ನಿವಾಸಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Share News