LATEST NEWS

ಸಂಗೀತದ ಮೂಲಕ ದೈವಿಕ ಆನಂದ ಮತ್ತು ಶಾಂತಿ ಸಾಧ್ಯ: ಸ್ವಾಮಿ ಜಿತಕಾಮನಂದಜಿ

ಮಂಗಳೂರು: “ಸಂಗೀತದ ಮೂಲಕ ದೈವಿಕ ಆನಂದ ಹಾಗೂ ದೈಹಿಕ ಮತ್ತು ಮಾನಸಿಕ ಶಾಂತಿಯನ್ನು ಹೊಂದಲು ಸಾಧ್ಯ. ಸ್ವಾಮಿ ವಿವೇಕಾನಂದರು ಕೂಡ ಸಂಗೀತದ ತೀವ್ರ ಅಭ್ಯಾಸಿಯಾಗಿದ್ದರು ಮತ್ತು ಸಂಗೀತ ಪ್ರೇಮಿಯಾಗಿದ್ದರು” ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮನಂದಜಿ ತಿಳಿಸಿದ್ದಾರೆ.

ನಗರದ ರಾಮಕೃಷ್ಣ ಮಠದಲ್ಲಿ ಕಲಾಸಾಧನ ಸಂಸ್ಥೆಯ ಆಶ್ರಯದಲ್ಲಿ ಮತ್ತು ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಭ್ರಮ ‘ರಾಗ ಸುಧಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೃಷ್ಟಿಯ ಆದಿಯಿಂದಲೂ ಸಂಗೀತವು ನಮ್ಮ ಜೊತೆಯಾಗಿ ಬಂದಿದೆ. ಮಠದ ಪ್ರಶಾಂತ ಪರಿಸರದಲ್ಲಿ ಕಲಾಸಾಧನ ತಂಡವು ಈ ಸಂಗೀತ ಸಂಭ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ,
ದಕ್ಷಿಣ ಕನ್ನಡ ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ,ಖ್ಯಾತ ಹೃದ್ರೋಗ ತಜ್ಞ ಡಾ. ಮೋಹನ್ ಪೈ, ಎಂಆರ್‌ಪಿಎಲ್ ನಿವೃತ್ತ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ,ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಶಾಂತ್ ಪೈ ,ಶಕ್ತಿನಗರದ ಶಕ್ತಿ ಕಾಲೇಜು ಆಡಳಿತಾಧಿಕಾರಿ ರಮೇಶ್ ,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್.,ಮಂಗಳೂರು ರೋಟರಿ ಸೆಂಟ್ರಲ್‌ನ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ರೈ ಕಟ್ಟ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಕಲಾವಿದರನ್ನು ಗೌರವಿಸಿ, ಸನ್ಮಾನಿಸಲಾಯಿತು. ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಸ್ಮಿತಾ ಅವರು ಕಲಾವಿದರ ಪರಿಚಯ ಮಾಡಿಕೊಟ್ಟರೆ, ಶ್ರೀನಿವಾಸ್ ನಾಯಕ್ ಇಂದಾಜೆ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ಆಚಾರ್ಯ ಅವರು ವಂದನಾರ್ಪಣೆ ಮಾಡಿದರು.

ಮನಸೂರೆಗೊಂಡ ಸಂಗೀತ ಕಚೇರಿ:

ಉದ್ಘಾಟನೆಯ ಬಳಿಕ ಪುಣೆಯ ಖ್ಯಾತ ಹಿಂದೂಸ್ತಾನಿ ಗಾಯಕರಾದ ಆದಿನಾಥ್ ಮೋದಕ್ (ಆದಿತ್ಯ ಮೋದಕ್) ಅವರಿಂದ ಅದ್ಭುತ ಸಂಗೀತ ಕಾರ್ಯಕ್ರಮ ಜರುಗಿತು. ಇವರಿಗೆ ತಬಲಾದಲ್ಲಿ ಬೆಂಗಳೂರಿನ ಅಕ್ಷಯ್ ಜೋಷಿ, ಹಾರ್ಮೋನಿಯಂನಲ್ಲಿ ಯಲ್ಲಾಪುರದ ಸತೀಶ್ ಭಟ್ ಹೆಗ್ಗಾರ್ ಹಾಗೂ ತಾನ್ಪುರದಲ್ಲಿ ಮಂಗಳೂರಿನ ಕಾರ್ತಿಕ್ ಮತ್ತು ಪ್ರದಯ್ ಸಾಥ್ ನೀಡಿ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದರು.

Share News