DAKSHINA KANNADAHOMELATEST NEWS

ಭಾರೀ ಮಳೆ ಹಿನ್ನೆಲೆ: ಆ.4 ರಂದು ದ.ಕ ಜಿಲ್ಲೆಯ ಎರಡು ಉಪವಿಭಾಗಗಳ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯ ಎರಡು ಉಪವಿಭಾಗಗಳಿಗೆ ಆ.4 ರಂದು ಶಾಲಾ-ಕಾಲೇಜುಗಳಿಗೆ ತುರ್ತು ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಮಂಗಳೂರು ಉಪವಿಭಾಗ: ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ಮತ್ತು ಉಳ್ಳಾಲ ತಾಲ್ಲೂಕುಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (10ನೇ ತರಗತಿವರೆಗೆ, ಎಲ್ಲಾ ವಸತಿ ಶಾಲೆಗಳು ಸೇರಿದಂತೆ) ರಜೆ ನೀಡಲಾಗಿದೆ.

ಪುತ್ತೂರು ಉಪವಿಭಾಗ: ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲ್ಲೂಕುಗಳ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ (PUC), ಐಟಿಐ (ITI) ಮತ್ತು ಡಿಪ್ಲೊಮಾ ಕಾಲೇಜುಗಳಿಗೆ (12ನೇ ತರಗತಿವರೆಗೆ, ಎಲ್ಲಾ ವಸತಿ ಶಾಲಾ-ಕಾಲೇಜುಗಳು ಸೇರಿದಂತೆ) ರಜೆ ಘೋಷಿಸಲಾಗಿದೆ.

ಈ ರಜೆ ಆದೇಶವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ‘ವಿಪತ್ತು ನಿರ್ವಹಣಾ ಕಾಯ್ದೆ 2005’ರ ನಿಯಮಾನುಸಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ಜಿಲ್ಲಾಡಳಿತದ ಪ್ರಮುಖ ಮುನ್ನೆಚ್ಚರಿಕೆಗಳು:

ನದಿತೀರ, ಸಮುದ್ರತೀರಕ್ಕೆ ನಿರ್ಬಂಧ: ಪ್ರವಾಸಿಗರು, ಸಾರ್ವಜನಿಕರು ಹಾಗೂ ಮಕ್ಕಳು ನೀರಿರುವ ತಗ್ಗು ಪ್ರದೇಶ, ಕೆರೆ, ನದಿ ಹಾಗೂ ಸಮುದ್ರತೀರಕ್ಕೆ ತೆರಳದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ವಾಹನ ಚಾಲಕರು ಸಹ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು.

ಮೀನುಗಾರರಿಗೆ ಸೂಚನೆ: ಸಮುದ್ರದ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು.

ಸ್ಥಳದಲ್ಲೇ ಇರಲು ಅಧಿಕಾರಿಗಳಿಗೆ ಆದೇಶ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.

ಕಾಳಜಿ ಕೇಂದ್ರಗಳು ಸನ್ನದ್ಧ: ಮಳೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಸಾರ್ವಜನಿಕರ ರಕ್ಷಣೆಗಾಗಿ ಆಯಾ ತಾಲ್ಲೂಕು ಅಧಿಕಾರಿಗಳು ತಕ್ಷಣವೇ ಕಾಳಜಿ ಕೇಂದ್ರಗಳನ್ನು (Care Centers) ತೆರೆದು ಸಿದ್ಧ ಸ್ಥಿತಿಯಲ್ಲಿಟ್ಟುಕೊಳ್ಳಲು ಆದೇಶಿಸಲಾಗಿದೆ.

ತುರ್ತು ಸಹಾಯವಾಣಿ: ಪ್ರಾಕೃತಿಕ ವಿಕೋಪ ಅಥವಾ ಮಳೆಯಿಂದ ಯಾವುದೇ ತುರ್ತು ತೊಂದರೆ ಎದುರಾದಲ್ಲಿ ಸಾರ್ವಜನಿಕರು ತಕ್ಷಣವೇ ಜಿಲ್ಲಾಡಳಿತದ ಉಚಿತ ತುರ್ತು ಸಹಾಯವಾಣಿ ಸಂಖ್ಯೆ 1077 ಅನ್ನು ಸಂಪರ್ಕಿಸಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Share News