ಮಂಗಳೂರು: ದಕ್ಷಿಣ ಕನ್ನಡದಲ್ಲಿ ಇಂದು ಮುಂಜಾನೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಗುಡ್ಡ ಕುಸಿತ, ಮಣ್ಣು ಜರಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.

ಬೆಳ್ತಂಗಡಿ ತಾಲ್ಲೂಕಿನ ಬಹುತೇಕ ಕಡೆ ಪ್ರವಾಹದ ಭೀತಿ ತಲೆದೋರಿದೆ. ತಾಲ್ಲೂಕಿನ ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಸೋಮಾವತಿ ಸೇರಿಂದತೆ ಎಲ್ಲಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಕೃಷಿ ಭೂಮಿಗಳು ಹಾಗೂ ಅಡಿಕೆ ತೋಟಗಳು ಕೃತಕ ನೆರೆಗೆ ಸಿಲುಕಿ ಭಾರೀ ಹಾನಿಯಾಗಿದೆ. ರಸ್ತೆಯಲ್ಲಿಯೇ ನದಿಯಂತೆ ನೀರು ಹರಿಯುತ್ತಿರುವುದರಿಂದ ಲಾಯಿಲ – ಕಿಲ್ಲೂರು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಧರ್ಮಸ್ಥಳದ ಮಣ್ಣಸಂಕ ಪ್ರದೇಶ ಮುಳುಗಡೆಯಾಗಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಇನ್ನು ಸೋಮಂತಡ್ಕ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಎರಡೂ ಬದಿಯ ಮಳೆ ನೀರನ್ನು ಒಂದೇ ಚರಂಡಿಗೆ ಹರಿಸಿರುವುದರಿಂದ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಿಂದೆ ಇದ್ದಂತೆ ನೀರು ಹರಿಯುವ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಬಹುತೇಕ ಎಲ್ಲಾ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಬಹುತೇಕ ಅಣೆಕಟ್ಟೆಗಳು ಮುಳುಗಿದ್ದು, ಮುಂಡಾಜೆ, ಪುದುವೆಟ್ಟು, ಕಿಲ್ಲೂರು, ಶಿರ್ಲಾಲು, ಸುಲ್ಕೇರಿಮೊಗ್ರು , ಚಾರ್ಮಾಡಿ, ನೆರಿಯ ಈ ಮುಂತಾದ ಭಾಗಗಳಲ್ಲಿ ಕೃಷಿ ತೋಟಗಳು ಭಾಗಶಃ ಮುಳುಗಡೆಯಾಗಿವೆ.
