ಮಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ಭಾನುವಾರ ರಾತ್ರಿ ವಿಶೇಷವಾಗಿ ಗುಲಾಬಿ ಬಣ್ಣದ (ಪಿಂಕ್ ಲೈಟ್) ವಿದ್ಯದ್ದೀಪಾಲಂಕಾರದ ಬೆಳಕಿನಲ್ಲಿ ಕಂಗೊಳಿಸಿತು.

ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ. 2,000 ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಹಾಗೂ ಆತ್ಮಗೌರವದ ಜೀವನ ರೂಪಿಸಿಕೊಳ್ಳಲು ನೆರವಾಗಿರುವ ಗೃಹಲಕ್ಷ್ಮೀ ಯೋಜನೆಯು ಜಾರಿಗೆ ಬಂದು ಇದೇ ಆಗಸ್ಟ್ 30ಕ್ಕೆ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸರ್ಕಾರವು ಈ ಮೂರು ವರ್ಷಗಳ ಸಂಭ್ರಮದ ಸುಸಂದರ್ಭದಲ್ಲಿ, ಮಹಿಳೆಯರ ಹೆಮ್ಮೆಯ ಮತ್ತು ಸಬಲೀಕರಣದ ಸಂಕೇತವೆಂದು ಗುರುತಿಸಲಾಗಿರುವ ಗುಲಾಬಿ ಬಣ್ಣದ ವಿಶಿಷ್ಟ ಬೆಳಕಿನ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಕಲ್ಪಿಸಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಆಕರ್ಷಕ ವಿದ್ಯದ್ದೀಪಾಲಂಕಾರವನ್ನು ಆಯೋಜಿಸಿತ್ತು.

ರಾಜ್ಯಾದ್ಯಂತ ಭಾರಿ ಜನಪ್ರಿಯತೆ ಗಳಿಸಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇದುವರಗೆ ಒಟ್ಟು 1.20 ಕೋಟಿ ಫಲಾನುಭವಿಗಳ ಖಾತೆಗೆ 76,500 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೇರವಾಗಿ ಪಾವತಿಸುವ ಮೂಲಕ ಸರ್ಕಾರ ದಾಖಲೆ ಬರೆದಿದೆ.
