ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಜಪ್ಪಿನಮೊಗರು ಇದರ 18ನೇ ವರ್ಷದ ಮಹೋತ್ಸವದ ಅಂಗವಾಗಿ, ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಮಂಗಳೂರು ಪಂಪ್‌ವೆಲ್ ಕಲ್ಪವೃಕ್ಷದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾದ ಭವ್ಯ ‘ಗ್ರಾಮೀಣ ಕ್ರೀಡೋತ್ಸವ’ಕ್ಕೆ ಜಪ್ಪಿನಮೊಗರಿನಲ್ಲಿ ಇಂದು ಸಡಗರದ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಬಳಿಕ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಮಾಜಿ ಕಾರ್ಪೊರೇಟರ್ ನಾಗೇಂದ್ರ ಅವರು ಎಲ್ಲರನ್ನೂ ಸ್ವಾಗತಿಸಿದರು.

ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ರಮೇಶ್ ಸಾಲಿಯಾನ್ ಬಜಾಲ್ ಅವರು, “ಸಾಮಾಜಿಕ ಕಾಳಜಿಯೊಂದಿಗೆ ನಿರಂತರವಾಗಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನಾಗೇಂದ್ರ ಅವರ ಕಾರ್ಯ ಶ್ಲಾಘನೀಯ. ಈ ಗ್ರಾಮೀಣ ಕ್ರೀಡೋತ್ಸವವು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವಲ್ಲಿ ಮತ್ತಷ್ಟು ಯಶಸ್ವಿಯಾಗಲಿ,” ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಮೇಶ್ ಅಧಿಕಾರಿ ಮಾತನಾಡಿ, “ಈ ಕ್ರೀಡೋತ್ಸವವು ಇಡೀ ಊರಿನ ಜಾತ್ರೆಯಂತೆಯೇ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ. ಸಾರ್ವಜನಿಕರ ಸೇವೆ ಹಾಗೂ ಒಗ್ಗಟ್ಟಿಗೆ ಪೂರಕವಾದ ಇಂತಹ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು,” ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸುತ್ತಿರುವ ತೀರ್ಪುಗಾರರನ್ನು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆರ್ಯ ಮರಾಠ ಭವನದ ಮೋಹನ್ ರಾವ್ ಎಕ್ಕೂರು ಮಾತನಾಡಿ, “ಕ್ರೀಡೆಯು ದೈಹಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಇಂತಹ ವಿಶಿಷ್ಟ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಇಂದಿನ ಯುವ ಪೀಳಿಗೆಗೆ ಉತ್ತಮ ಸ್ಫೂರ್ತಿ ದೊರೆಯುತ್ತದೆ. ಕ್ರೀಡೆಯಲ್ಲಿ ಸದಾ ಗೆಲುವಿಗಿಂತಲೂ ಸಕ್ರಿಯವಾಗಿ ಪಾಲ್ಗೊಳ್ಳುವುದು ಮುಖ್ಯ,” ಎಂದು ಅಭಿಪ್ರಾಯಪಟ್ಟರು.
ಬಳಿಕ ಕ್ರೀಡಾಂಗಣದಲ್ಲಿ ಗಣ್ಯರು ಜಂಟಿಯಾಗಿ ಕ್ರೀಡಾಕೂಟದ ಸ್ಪರ್ಧೆಗಳಿಗೆ ಅಧಿಕೃತ ಚಾಲನೆ ನೀಡಿದರು.
ಕ್ರೀಡೋತ್ಸವದ ಅಂಗವಾಗಿ ವಿವಿಧ ವಯೋಮಾನದವರು, ಮಹಿಳೆಯರು ಹಾಗೂ ಪುರುಷರಿಗಾಗಿ ಹಲವು ಮನರಂಜನಾ ಮತ್ತು ತಂಡ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಹಿಳೆಯರಿಗಾಗಿ ಥ್ರೋಬಾಲ್ ಹಾಗೂ ಹಗ್ಗಜಗ್ಗಾಟ, ಪುರುಷರಿಗಾಗಿ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.
ಇದರ ಜೊತೆಗೆ ಎಲ್ಲರಿಗೂ ಮುಕ್ತವಾಗಿರುವ ಮಡಿಕೆ ಒಡೆಯುವ… ಸ್ಪರ್ಧೆಯೂ ನಡೆಯಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸ್ಥಳೀಯ ಸಂಪ್ರದಾಯ ಮತ್ತು ಗ್ರಾಮೀಣ ಕೌಶಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ತೆಂಗಿನ ಗರಿಯಿಂದ ಪೊರಕೆ ತಯಾರಿಸುವ ಸ್ಪರ್ಧೆ ಹಾಗೂ ತೆಂಗಿನಕಾಯಿ ಸಿಪ್ಪೆ ಸುಲಿಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಗೀತಾ, ಹರೀಶ್ ಚಂದ್ರ, ಜಗದೀಶ್, ಮೋಹಿನಿ ಗಟ್ಟಿ, ಶ್ರೀನಿವಾಸ್ ಗಟ್ಟಿ, ಧನುಷ್ ಸಾಲಿಯಾನ್ ಬಜಾಲ್, ಮೋಹನ್ ರಾವ್, ಉಮೇಶ್ ಅಧಿಕಾರಿ, ಉಮಾನಾಥ್ ಪೂಜಾರಿ, ನಾರಾಯಣ ಸಪಾಳ್ಯ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
