ವಿಟ್ಲ: ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ತುಳುನಾಡಿನ ಭವ್ಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ, ವಿಟ್ಲದ ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ತುಳು ಪರ್ಬ’ ಎಂಬ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯ ಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಅಭ್ಯಾಗತರನ್ನು ಶಾಲಾ ವಿದ್ಯಾರ್ಥಿಗಳು ಕಲಶ ಹಿಡಿದು, ಭವ್ಯವಾದ ಚೆಂಡೆ ವಾದನ ಹಾಗೂ ಯಕ್ಷಗಾನ ವೇಷಧಾರಿ ಯೊಂದಿಗೆ ಗೌರವಪೂರ್ವಕವಾಗಿ ಸಭಾಂಗಣಕ್ಕೆ ಬರಮಾಡಿಕೊಂಡರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಹ ಶಿಕ್ಷಕಿ ಶ್ರೀಮತಿ ಚೈತ್ರ ಅವರು ಎಲ್ಲರನ್ನೂ ಸ್ವಾಗತಿಸಿದರು. ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಅತಿಥಿಗಳಿಗೆ ವೀಳ್ಯ ಹಾಗೂ ಅಡಿಕೆ ನೀಡಿ ಗೌರವಿಸಲಾಯಿತು. ತದನಂತರ ಜ್ಯೋತಿ ಬೆಳಗಿ, ಕಲ್ಪವೃಕ್ಷದ ಹಿಂಗಾರವನ್ನು ಅರಳಿಸಿ, ಕಲಶಕ್ಕೆ ಭತ್ತವನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದ ವಿಶೇಷತೆಯೆಂದರೆ ಇಡೀ ಸಭಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲೇ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳುನಾಡ ರಂಗಬೊಳ್ಳಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ರವಿ ರಾಮಕುಂಜ ಅವರನ್ನು ಸಂಸ್ಥೆಯ ಪರವಾಗಿ ಗೌರವಯುತವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ” ಎಂದು ತಿಳಿಹೇಳಿದ್ದಲ್ಲದೆ, ತಮ್ಮ ಹಾಸ್ಯಭರಿತ ಮಾತುಗಳ ಮೂಲಕ ಇಡೀ ಸಭಿಕರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ತುಳು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ವಂ. ಫಾ. ಮೈಕಲ್ ಲೋಬೋ ಅವರು ಮಾತನಾಡಿ, ತುಳುನಾಡಿನ ವಿಶೇಷತೆ, ಇಲ್ಲಿನ ಮಣ್ಣಿನ ಗುಣ ಹಾಗೂ ಸಂಸ್ಕೃತಿಯ ವಿಶಿಷ್ಟತೆಯನ್ನು ಹಾಡಿ ಕೊಂಡಾಡಿದರು.

ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಶ್ರೀಯುತ ವೆಲೇರಿಯನ್ ವೇಗಸ್, ಶಾಲಾ ಪ್ರಾಂಶುಪಾಲರಾದ ವಂ. ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಸಿ. ಮರೀನಾ ಹಾಗೂ ಸಿಸ್ಟರ್ ಜಾನೆಟ್ ಉಪಸ್ಥಿತರಿದ್ದರು. ಸಹಶಿಕ್ಷಕ ಜಯರಾಮ ಶಾಸ್ತ್ರಿ ಅವರು ಎಲ್ಲರನ್ನೂ ವಂದನೆಗೈದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತುಳು ಗೀತೆಗಳು, ನೃತ್ಯ, ಭಾಷಣ ಹಾಗೂ ತುಳುನಾಡಿನ ಇತಿಹಾಸವನ್ನು ಬಿಂಬಿಸುವ ‘ತುಳುನಾಡ ವೈಭವ’ ಎಂಬ ವಿನೂತನ ರೂಪಕ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನ, ಅಪರೂಪದ ವಿವಿಧ ಔಷಧೀಯ ಸಸ್ಯಗಳ ಪರಿಚಯ, ಐತಿಹಾಸಿಕ ವಿಶೇಷತೆಗಳ ವಿವರಣೆ ಹಾಗೂ ತುಳುನಾಡಿನ ಹಳೆಯ ಕಾಲದ ಅಪರೂಪದ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನವು ಇಂದಿನ ತಲೆಮಾರಿಗೆ ತುಳು ಸಂಸ್ಕೃತಿಯ ಶ್ರೀಮಂತಿಕೆಯನ್ನು ನೆನಪಿಸುವಲ್ಲಿ ಯಶಸ್ವಿಯಾಯಿತು.















