ಮಂಗಳೂರು, ಆಗಸ್ಟ್ 13: ನಂತೂರಿನ ಪಾದುವ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ ತುಳುನಾಡಿನ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ “ಆಟಿದ ಗಮ್ಮತ್” ಕಾರ್ಯಕ್ರಮವನ್ನು ಕಾಲೇಜಿನ ತೆರೆದ ಸಭಾಂಗಣ ದಲ್ಲಿ ಸಂಭ್ರಮದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆ| ಫಾ. ಅರುಣ್ ವಿಲ್ಸನ್ ಲೋಬೊ ಅವರು ಮಾತನಾಡಿ, “ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಿ, ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು” ಎಂದು ಕರೆ ನೀಡಿದರು. ತಮ್ಮ ವೈಯಕ್ತಿಕ ಅನುಭವಗಳ ಮೂಲಕ ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ತಮ್ಮ ಪ್ರೀತಿಯನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡರು.
ಮುಖ್ಯ ಅತಿಥಿಯಾಗಿದ್ದ ವಿಜೆ ಮಧುರಾಜ್ ಗುರುಪುರ ಅವರು NSS ವಿದ್ಯಾರ್ಥಿಗಳನ್ನು ಅಭಿನಂದಿಸಿ, “ಆಟಿದ ಗಮ್ಮತ್”ನಂತಹ ಕಾರ್ಯಕ್ರಮಗಳು ತುಳು ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ಪೀಳಿಗೆಯು ತುಳುನಾಡಿನ ಸಂಸ್ಕೃತಿ, ಭಾಷೆ ಹಾಗೂ ಮೌಲ್ಯಗಳನ್ನು ಅರಿತುಕೊಂಡು ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು. ಇದೇ ವೇಳೆ ಪಾದುವ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆ ಹಾಗೂ ಶಿಸ್ತನ್ನು ಅವರು ಶ್ಲಾಘಿಸಿದರು.
ಪಾದುವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರೋಶನ್ ವಿನ್ಸಿ ಸಂತುಮಯೋರ್ ಅವರು ಮಾತನಾಡಿ, ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಜೀವನಕ್ಕೆ ಅಗತ್ಯವಾದ ಅನುಭವ, ಜ್ಞಾನ ಮತ್ತು ಮೌಲ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪರಿಸರ ಜಾಗೃತಿಯ ವಿಶೇಷ ಸನ್ಮಾನ: ಇದೇ ಸಂದರ್ಭದಲ್ಲಿ ಇತ್ತೀಚಿನ ಶೈಕ್ಷಣಿಕ ಸಾಲಿನಲ್ಲಿ ಪಾದುವ ಪದವಿ ಪೂರ್ವ ಕಾಲೇಜಿನಿಂದ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ NSS ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲು ಸಸಿಗಳನ್ನು ವಿತರಿಸುವ ಮೂಲಕ ಸನ್ಮಾನಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ವೇದಿಕೆಯಲ್ಲಿ ಪಾದುವ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೊಲಿ ಡಿಸೋಜಾ, ಪಾದುವ ಹೈಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೊಸಿನಾ ಡಿಸೋಜಾ, NSS ಯೋಜನಾಧಿಕಾರಿ ಶ್ರೀ ಯತಿರಾಜ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಹಾಯಕ NSS ಸಂಯೋಜಕರಾದ ಶ್ರೀ ಅನಿಲ್ ಡಿಮೆಲ್ಲೋ ಅವರು ಸ್ವಾಗತಿಸಿದರು. ಶ್ರೀಮತಿ ಲೊರೆಟ್ಟೆ ಆಂಥೋನಿ ಅವರು ವಂದಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಾನಿಷಾ ಹೊಳ್ಳ ಕಾರ್ಯಕ್ರಮವನ್ನು ನಿರೂಪಿಸಿದರು.
ಮನಸೆಳೆದ ಸಾಂಸ್ಕೃತಿಕ ವೈಭವ ಮತ್ತು ಪುರಾತನ ವಸ್ತುಗಳ ಪ್ರದರ್ಶನ: ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ NSS ವಿದ್ಯಾರ್ಥಿಗಳು ತುಳುನಾಡಿನ ವಿವಿಧ ಸಾಂಪ್ರದಾಯಿಕ ಕಲೆ, ಆಚರಣೆ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಸಾಂಸ್ಕೃತಿಕ ಪ್ರದರ್ಶನಗಳು ತುಳು ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಅನಾವರಣಗೊಳಿಸಿದವು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಪುರಾತನ ವಸ್ತುಗಳ ಪ್ರದರ್ಶನವು ಮಂಗಳೂರಿನ ಹಾಗೂ ತುಳುನಾಡಿನ ಹಿಂದಿನ ಕಾಲದ ಜನಜೀವನ, ಸಂಪ್ರದಾಯ ಮತ್ತು ದೈನಂದಿನ ಬದುಕಿನ ಪರಿಚಯವನ್ನು ನೀಡಿತು. ಹಳೆಯ ಕಾಲದ ವಸ್ತುಗಳನ್ನು ವೀಕ್ಷಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ನೆಲದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಮತ್ತಷ್ಟು ಹತ್ತಿರವಾದರು.









