DAKSHINA KANNADALATEST NEWS

ಮೂರು ತಿಂಗಳೊಳಗೆ ಉದ್ಯೋಗ ನೀಡಿ, ಇಲ್ಲವೇ ಭೂಮಿ ವಾಪಸ್ ಕೊಡಿ: ಎಂಆರ್‌ಪಿಎಲ್ ನಿರ್ವಸಿತರ ತೀವ್ರ ಆಗ್ರಹ

ಮಂಗಳೂರು, ಆ. 12: ಎಂಆರ್‌ಪಿಎಲ್‌ನ 4ನೇ ಹಂತದ ಭೂ ಸ್ವಾಧೀನದಿಂದ ನಿರ್ವಸಿತರಾದ ಕುಟುಂಬಗಳಿಗೆ 2026ರ ಮೇನಲ್ಲಿ ನಡೆದ ಸಭೆಯ ನಿರ್ಣಯದಂತೆ ಮುಂದಿನ ಮೂರು ತಿಂಗಳ ಒಳಗೆ ಉದ್ಯೋಗ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಇಲ್ಲದಿದ್ದರೆ 4ನೇ ಹಂತದ ವಿಸ್ತರಣೆ ನಿಲ್ಲಿಸಿ ಭೂಮಿಯನ್ನು ವಾಪಸ್ ನೀಡಬೇಕು ಎಂದು ನಾಲ್ಕನೇ ಹಂತದ ಎಂಆರ್‌ಪಿಎಲ್ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.


ಆ. 9ರ ರವಿವಾರ ಕುತ್ತೆತ್ತೂರಿನಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. 2016ರ ಡಿಸೆಂಬರ್‌ನಲ್ಲಿ ಪಂಚಾಯತ್ ತೆರಿಗೆ ಕಟ್ಟಿದ ಒಂದು ದಾಖಲೆಯನ್ನು ಪರಿಗಣಿಸಿ ಉದ್ಯೋಗ ನೀಡಲು 2024ರ ಜುಲೈನಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಆರ್ ಅಂಡ್ ಆರ್ ಸಭೆಯಲ್ಲಿ ನಿರ್ಣಯವಾಗಿತ್ತು. 7 ತಿಂಗಳ ಒಳಗೆ ಉದ್ಯೋಗ ಕಲ್ಪಿಸಲು ಸೂಚಿಸಲಾಗಿತ್ತು. ಆದರೆ ಸಮಿತಿಯ ಗಮನಕ್ಕೆ ಬಾರದೆ ಕಂಪನಿ ಅಧಿಕಾರಿಗಳು ಆಧಾರ್, ಪಡಿತರ, ಮತದಾರ ಚೀಟಿ ಕಡ್ಡಾಯ ಎಂದು ನಿಯಮ ಪರಿಷ್ಕರಿಸಿ ಸರ್ಕಾರಕ್ಕೆ ಕಳುಹಿಸಿದ್ದು, ಸರ್ಕಾರದ ಆದೇಶದಲ್ಲಿ 7 ತಿಂಗಳ ಗಡುವನ್ನು ಕೈಬಿಡಲಾಗಿದೆ ಎಂದು ಸಮಿತಿ ಗೌರವಾಧ್ಯಕ್ಷ ಡೋನಿ ಸುವಾರಿಸ್ ಆರೋಪಿಸಿದರು.


ನಿಕಟ ಪೂರ್ವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದ ಸಭೆಯಲ್ಲಿ ಪಂಚಾಯತ್ ತೆರಿಗೆ ದಾಖಲೆ ಇರುವವರಿಗೆ ಉದ್ಯೋಗ ನೀಡಲು ಎಂಆರ್‌ಪಿಎಲ್ ಒಪ್ಪಿತ್ತು. ಸಂಸದರು ಮತ್ತು ಶಾಸಕರ ಸಮ್ಮುಖದಲ್ಲೂ ಈ ನಿರ್ಣಯವಾಗಿತ್ತು. ಆದರೆ ಕಳೆದ 5 ವರ್ಷಗಳಿಂದ ಯಾವುದೇ ಉದ್ಯೋಗ ಆದೇಶ ಬಂದಿಲ್ಲ. ಕಳೆದ 11 ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ನೂರಾರು ಅಭ್ಯರ್ಥಿಗಳ ಭವಿಷ್ಯ ಪ್ರಶ್ನಾರ್ಹವಾಗಿದೆ ಎಂದು ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.

ಸಭೆಯಲ್ಲಿ ಮುಂದಿನ ಒಂದೆರಡು ತಿಂಗಳ ಒಳಗೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ರೈತ ಸಂಘಟನೆಗಳೊಂದಿಗೆ ಸೇರಿ ಎಂಆರ್‌ಪಿಎಲ್ ಮುಂಭಾಗ ಬೃಹತ್ ಚಳುವಳಿ ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಸಂಚಾಲಕ ಡೋನಿ ಸುವಾರಿಸ್, ಕಾರ್ಯದರ್ಶಿ ಕೇಶವ ಶೆಟ್ಟಿ, ಪ್ರೇಮನಾಥ ಪೂಜಾರಿ ಸೇರಿದಂತೆ ನೂರಾರು ನಿರ್ವಸಿತರು ಭಾಗವಹಿಸಿದ್ದರು.

Share News