ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ರಜೆ ಘೋಷಿಸಿದ ಜಿಲ್ಲೆಯಾಗಿದೆ. ಆದರೆ ಕೆಲವು ಬಾರಿ ಹವಾಮಾನ ಇಲಾಖೆಯ ಭಾರೀ ಮಳೆ ಮನ್ಸೂಚನೆ ಹಿನ್ನೆಲೆ ರಜೆ ನೀಡಿದಂದು ಮಳೆ ಬರದೇ ಇದ್ದುದು ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಬದಲಿಗೆ ತಾಲೂಕುವಾರು ಮಳೆ ರಜೆ ಘೋಷಿಸುವ ಕುರಿತು ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದೆ.

ಈ ಬಾರಿಯ ಮಳೆಗಾಲದಲ್ಲಿ ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುತ್ತಿದ್ದರು. ಆದರೆ ಎಲ್ಲಾ ತಾಲೂಕುಗಳಲ್ಲೂ ಒಂದೇ ರೀತಿಯ ಪರಿಸ್ಥಿತಿ ಇರಲಿಲ್ಲ. ಕೆಲವು ಭಾಗಗಳಲ್ಲಿ ಭಾರಿ ಮಳೆಯಿದ್ದರೆ, ಹಲವು ಕಡೆ ಸಾಮಾನ್ಯ ಮಳೆಯಷ್ಟೇ ದಾಖಲಾಗಿತ್ತು. ಆದರೂ ಇಡೀ ಜಿಲ್ಲೆಗೆ ರಜೆ ಘೋಷಿಸಿದ್ದರಿಂದ ಅನಗತ್ಯವಾಗಿ ಶಿಕ್ಷಣಕ್ಕೆ ಅಡ್ಡಿಯಾಯಿತು ಎಂಬ ಟೀಕೆ ಸಾಮಾಜಿಕ ಜಾಲತಾಣ, ಮಕ್ಕಳ ಪೋಷಕರು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳು ನಡೆಸಿದ್ದರು. ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತಹಸೀಲ್ದಾರ್, ಬಿಇಒ ಸೇರಿದಂತೆ ಸ್ಥಳೀಯ ಅಧಿಕಾರಿಗಳ ವರದಿ ಆಧರಿಸಿ, ಯಾವ ತಾಲೂಕಿನಲ್ಲಿ ಅಪಾಯದ ಪರಿಸ್ಥಿತಿ ಇದೆಯೋ ಅಲ್ಲಿ ಮಾತ್ರ ರಜೆ ಘೋಷಿಸುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಐಎಂಡಿ ಮುನ್ಸೂಚನೆ ನೀಡಿದಾಗ ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಶಿಕ್ಷಣ ಎಷ್ಟು ಮುಖ್ಯವೋ, ಮಕ್ಕಳ ಜೀವವೂ ಅಷ್ಟೇ ಅಮೂಲ್ಯ. ಆದರೆ ಮುಂದಿನ ದಿನಗಳಲ್ಲಿ ತಾಲೂಕುವಾರು ರಜೆ ಘೋಷಿಸುವ ವ್ಯವಸ್ಥೆ ಜಾರಿಗೆ ತರುವ ಉದ್ದೇಶವಿದೆ ಎಂದಿದ್ದಾರೆ.



