ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದ್ದ ವಿಶಿಷ್ಟ ಬರಡು ರಾಸುಗಳ ಚಿಕಿತ್ಸಾ ಶಿಬಿರ ಮತ್ತು ಅರಿವು ಕಾರ್ಯಕ್ರಮವು ತಾಲೂಕಿನ ಗೋಳ್ತಾಮಜಲು ಗ್ರಾಮದ ಅಮ್ಮ್ಟೂರ್‌ನಲ್ಲಿ ಯಶಸ್ವಿಯಾಗಿ ಜರುಗಿತು

ಕೃಷಿ ವಿಜ್ಞಾನ ಕೇಂದ್ರ ಪಶುಪಾಲನಾ ಇಲಾಖೆ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಕೊಯ್ಲಾ ಪಶು ವೈದ್ಯಕೀಯ ಮಹಾವಿದ್ಯಾಲಯ, ಗೋಳ್ತಾ ಮಜಲು ಗ್ರಾ.ಪಂ., ಆಶೀರ್ವಾದ ಸಂಜೀವಿನಿ ಒಕ್ಕೂಟ ಹಾಗೂ ಅಮ್ಮ್ಟೂರ್ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಜಂಟಿ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು. ಅಮ್ಮ್ಟೂರ್‌ನ ಮೋಹನ್ ಕಟ್ಟೆಮಾರ್ ಅವರ ಮನೆ ಎದುರಿನ ಗದ್ದೆಯಲ್ಲಿ ನಡೆದ ಶಿಬಿರದಲ್ಲಿ ಸುಮಾರು 20 ಬರಡು ಹಸುಗಳಿಗೆ ಒಂದೇ ಸೂರಿನಡಿ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, “ರೈತನ ಬೆವರು ಹಾಲಾಗಿ ಮಾರ್ಪಟ್ಟಾಗ ಮಾತ್ರ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ. ಹೈನುಗಾರರ ಪಾಲಿಗೆ ತಡೆಗೋಡೆಯಾಗಿರುವ ಬರಡು ಹಸುಗಳ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ತಜ್ಞರ ಶಿಬಿರ ಮಹತ್ವದ್ದಾಗಿದೆ” ಎಂದರು.

ಬಂಟ್ವಾಳ ತಾಲೂಕು ತಾಂತ್ರಿಕ ಕೃಷಿ ಅಧಿಕಾರಿ ಹಾಗೂ ಗೋಳ್ತಾಮಜಲು ಗ್ರಾಮದ ಆಡಳಿತಾಧಿಕಾರಿ ನಂದನ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹ ಣಾಧಿಕಾರಿ ಶ್ರೀ ಜ್ಯೋತಿರಾಜ್ ಅವರು ರೈತರಿಗೆ ಬ್ಯಾಂಕ್ ಸೌಲಭ್ಯಗಳು ಹಾಗೂ ಹಣಕಾಸು ನೆರವುಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಟಿ. ಜೆ. ರಮೇಶ್,ಡಾ |ದರ್ಣೇಶ್ ಎನ್. ಕೆ ಪಶು ವೈದ್ಯಕೀಯ ಸಹಪ್ರಧ್ಯಾಪಕರು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳದ ಸಹಾಯಕ ನಿರ್ದೇಶಕರಾದ ಡಾ. ಉಮೇಶ್ ಕಿರಣ್, ಕಲ್ಲಡ್ಕ ಪಶು ವೈದ್ಯಕೀಯ ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಕಾರ್ತಿಕ್, ಕೊಯ್ಲಾ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ರಜತ್ ಸಗರೆ ಹಾಗೂ ಡಾ. ತೇಜಸ್ವಿನಿ ಎಂ ಪಿ,

ಗೋಳ್ತಾಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸುನಿಲ್ ಕುಮಾರ್, ಅಮ್ಮ್ಟೂರ್ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಪ್ರಭಾಕರ್ ಶೆಟ್ಟಿ, ಆಶೀರ್ವಾದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿದ್ಯಾ ಜಿ. ಕೊಟ್ಟಾರಿ, ಎನ್‌ಆರ್‌ಎಲ್‌ಎಂ ಮೇಲ್ವಿಚಾರಕಿ ಶ್ರೀಮತಿ ಕುಸುಮ, ಗೋಳ್ತಾಮಜಲು ಹಾಗೂ ಅಮ್ಮ್ಟೂರ್ ಗ್ರಾಮದ ಕೃತಕ ಗರ್ಭದಾರಕರು , ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಮಾರು 20 ಬರಡು ಹಸುಗಳ ಸ್ಥಳದಲ್ಲಿಯೇ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಜೊತೆಗೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತರಿಗೆ ಉಚಿತ ಪೌಷ್ಟಿಕಾಂಶ ಪೂರಕ ಆಹಾರ,ಹಾರ್ಮೋನ್ ಇಂಜೆಕ್ಷನ್, ಖನಿಜ ಮಿಶ್ರಣ,ಕ್ಯಾಲ್ಸಿಯಂ ಲಿಕ್ವಿಡ್,ಜಂತು ಹುಳ ನಿವಾರಣಾ ಔಷಧಿಗಳನ್ನು ವಿತರಿಸಲಾಯಿತು. ಸುಮಾರು 60ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡರು.ತಾಲೂಕು ಪಶು ಸಖಯರು ಮತ್ತು ಕೃಷಿ ಸಖಿ ಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಭವಾನಿ ಮತ್ತು ಪಶುಸಖಿ ಸರಿತಾ ಪ್ರಾರ್ಥಿಸಿದರು. ಅಮ್ಮ್ಟೂರ್ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀ ಸೌಮ್ಯ ಸ್ವಾಗತಿಸಿದರು. ಪೆರುವಾಯಿ ಗ್ರಾಮದ ಕೃಷಿ ಸಖಿ ಶ್ರೀಮತಿ ಸವಿತಾ ಡಿ’ಸೋಜಾ ವಂದಿಸಿದರು. ಗೋಳ್ತಾಮಜಲು ಗ್ರಾಮದ ಕೃಷಿ ಸಖಿ ಪುಷ್ಪಾವತಿ. ಪಿ ಕಾರ್ಯಕ್ರಮವನ್ನು ನಿರೂಪಿಸಿದರು.







