ನವದೆಹಲಿ: ದೇಶದಲ್ಲಿ ಸೇವಾ ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬಸ್ಥರಿಗೆ ಯಾವುದೇ ಅಡೆ-ತಡೆಗಳಿಲ್ಲದೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಅನುಕೂಲವಾಗುವಂತೆ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS)ಯಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳ ಕ್ಲೈಮ್‌ಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವುದಕ್ಕೆ ರಕ್ಷಣಾ ಸಚಿವಾಲಯವು ಶಾಶ್ವತ ವ್ಯವಸ್ಥೆ ರೂಪಿಸಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ‘ನಿಯಮ 377’ರಡಿ ಒತ್ತಾಯಿಸಿದ್ದಾರೆ.
ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿರುವ ಸಂಸದರು, ಯೋಧನಾಗಿ, ಇದೀಗ ಸಂಸದನಾಗಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಹಿನ್ನಲೆಯಲ್ಲಿ ಸೇನಾ ನಿವೃತ್ತ ಆರೋಗ್ಯ ಭದ್ರತೆ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದು ನನ್ನ ಕರ್ತವ್ಯ. ECHS ಯೋಜನೆಯು ನೋಂದಾಯಿತ ಆಸ್ಪತ್ರೆಗಳ ನೆಟ್‌ವರ್ಕ್ ಅನ್ನು ಅವಲಂಬಿಸಿದೆ. ಆದರೆ, ಈ ಆಸ್ಪತ್ರೆಗಳು ಸಲ್ಲಿಸುವ ಮರುಪಾವತಿ ಕ್ಲೈಮ್ ಸಕಾಲಕ್ಕೆ ವಿಲೇವಾರಿಯಾಗದೆ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಅಲ್ಲದೆ ನಿಗದಿತ ಕಾರಣಗಳಿಲ್ಲದೆ ಅನಗತ್ಯವಾದ ಮಾಹಿತಿ ಕೇಳಲಾಗುತ್ತಿದೆ. ಇದರಿಂದ ಆಸ್ಪತ್ರೆಗಳು ಆರ್ಥಿಕ ತೊಂದರೆಗಳಿಗೆ ಒಳಗಾಗುತ್ತಿದ್ದು, ಈ ಕಾರಣಕ್ಕೆ ಸೀಮಿತ ರೋಗಿಗಳಿಗಷ್ಟೇ ಚಿಕಿತ್ಸೆ ನೀಡಲು ಮುಂದಾಗುತ್ತಿರುವುದು ಹಾಗೂ ಈ ಯೋಜನೆಯಿಂದಲೇ ಹಿಂದೆ ಸರಿಯುತ್ತಿರುವುದು ಅರ್ಹ ಫಲಾನುಭವಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಈ ಸಮಸ್ಯೆಯ ನೇರ ಪರಿಣಾಮ ಹಿರಿಯ ಫಲಾನುಭವಿಗಳು ಅನುಭವಿಸುವಂತಾಗಿದ್ದು, ಚಿಕಿತ್ಸೆಗಾಗಿ ದೂರದ ಊರುಗಳಿಗೆ ಅಲೆಯುವುದು, ವೈದ್ಯಕೀಯ ಸೇವೆ ವಿಳಂಬ ಅಥವಾ ಸ್ವಂತ ಹಣದಿಂದಲೇ ಚಿಕಿತ್ಸೆ ಪಡೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹೀಗಿರುವಾಗ, ಸಚಿವಾಲಯವು ಈ ಗಂಭೀರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕೆಂದು ಸದನದಲ್ಲಿ ಮನವಿ ಮಾಡಿದ್ದಾರೆ.ಈ ವಿಚಾರದಲ್ಲಿ ಕೇಂದ್ರ ರಕ್ಷಣಾ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ, ರಾಷ್ಟ್ರೀಯ ಮಟ್ಟದಲ್ಲಿ ಕಾಲಮಿತಿಯ ಕ್ಲೈಮ್ ವಿಲೇವಾರಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಕ್ಲೈಮ್‌ಗಳ ಆರಂಭಿಕ ಪರಿಶೀಲನೆ, ವೈದ್ಯಕೀಯ ಆಡಿಟ್, ಆಕ್ಷೇಪಣೆ ಸಲ್ಲಿಕೆ, ಆಸ್ಪತ್ರೆಯ ಸ್ಪಷ್ಟನೆ, ಅಂತಿಮ ಅನುಮೋದನೆ ಹಾಗೂ ಪಾವತಿಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು ಎಂದು ಅವರು ರಕ್ಷಣಾ ಸಚಿವಾಲಯವನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಒಂದೇ ಕ್ಲೈಮ್‌ಗೆ ಪದೇ ಪದೇ ಹಂತ – ಹಂತವಾಗಿ ಆಕ್ಷೇಪಣೆ ಎತ್ತುವುದನ್ನು ಕೂಡ ಸಂಪೂರ್ಣವಾಗಿ ಕೈಬಿಡಬೇಕು. ಇದಲ್ಲದೆ, ಪ್ರತಿಯೊಂದು ವೈದ್ಯ ವೆಚ್ಚದ ಬಿಲ್‌ನ ಸ್ಥಿತಿಗತಿ, ಬಾಕಿಯಿರುವ ಸಮಯ, ಕಡತವು ಯಾವ ಅಧಿಕಾರಿಯ ಬಳಿಯಿದೆ ಹಾಗೂ ಕ್ಲೈಮ್ ತಡೆಹಿಡಿಯಲು ಕಾರಣವೇನು ಎಂಬಿತ್ಯಾದಿ ವಿಚಾರಗಳಲ್ಲಿ ಪಾರದರ್ಶಕತೆ ತರುವುದಕ್ಕೆ ಪ್ರತ್ಯೇಕ ಎಲೆಕ್ಟ್ರಾನಿಕ್ ಡ್ಯಾಶ್‌ಬೋರ್ಡ್ ವ್ಯವಸ್ಥೆಯನ್ನು ಕೂಡ ಜಾರಿಗೆ ತರಬೇಕೆಂದು ಕ್ಯಾ.ಚೌಟ ಅವರು ಮನವಿ ಮಾಡಿದ್ದಾರೆ.ಅಂತೆಯೇ ನಿಗದಿತ ಸಮಯ ಮೀರಿದ ಕ್ಲೈಮ್‌ಗಳನ್ನು ವಿಲೇವಾರಿ ಮಾಡಲು ಪ್ರಾದೇಶಿಕ ಉಸ್ತುವಾರಿ ಅಧಿಕಾರಿಯನ್ನು ನೇಮಿಸಬೇಕು. ಆಸ್ಪತ್ರೆಗಳಿಗೆ ಪಾವತಿಗೆ ಬಾಕಿ ಮೊತ್ತದ ವಿವರವನ್ನು ಸಚಿವಾಲಯವು ನಿಯಮಿತವಾಗಿ ಪ್ರಕಟಿಸಬೇಕು ಹಾಗೂ ಆಸ್ಪತ್ರೆಗಳು ಸೇವೆ ಸ್ಥಗಿತಗೊಳಿಸುವ ಮುನ್ನ ಈ ಬಗ್ಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಕೂಡ ಇರಬೇಕು ಹಾಗೂ ಆಂತರಿಕ ಲೆಕ್ಕಪರಿಶೋಧನೆ ನೆಪದಲ್ಲಿ ಮಾಜಿ ಸೈನಿಕರ ಕ್ಯಾಶ್‌ಲೆಸ್ ಚಿಕಿತ್ಸೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ, ನಮ್ಮ ದೇಶ ಕಾಯುವ ಯೋಧರು ಹಾಗೂ ಅವರ ಕುಟುಂಬಸ್ಥರಿಗೆ ವಿಶ್ವಾಸರ್ಹ ವೈದ್ಯಕೀಯ ಭದ್ರತೆ ಒದಗಿಸಲು ಈ ರೀತಿಯ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಕ್ಯಾ. ಬ್ರಿಜೇಶ್ ಚೌಟ ಅವರು ಸದನದಲ್ಲಿ ಒತ್ತಿ ಹೇಳಿದ್ದಾರೆ.
