ಪುತ್ತೂರು: ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಘಟನೆ ಬಗ್ಗೆ ಸುಳ್ಳು ಸುದ್ದಿ ಮಾಡಿದ ಹಲವು 7 ವೆಬ್ ತಾಣಗಳ ವಿರುದ್ಧ ಪ್ರಕರಣ ದಾಖಲಾಗಿದೆ.


ಘಟನೆ ವಿವರ
ಪುತ್ತೂರಿನ ಯುವತಿಯೋರ್ವಳು ಜು.8 ರಂದು ಬೆಳಿಗ್ಗೆ 6.45ಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ ತನ್ನ ಪರಿಚಯದ ಹಾಗೂ ತನ್ನೊಂದಿಗೆ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದ ಸೊಹೈಲ್ ಎಂಬಾತನು ಚಾಕು ಹಿಡಿದುಕೊಂಡು ನಿಂತಿರುವುದನ್ನು ನೋಡಿದ್ದಾಳೆ. ಜೊತೆಗೆ ಯುವತಿಯು ತನ್ನನ್ನು ಸೊಹೈಲ್ ಹಾಗೂ ಆತನೊಂದಿದ್ದ 04 ಜನ ಸ್ನೇಹಿತರು ವಾಹನವೊಂದರಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದಾರೆ ಎಂಬುದಾಗಿ ಭಾವಿಸಿಕೊಂಡು, ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಆರೋಪಿತ ಯುವಕರನ್ನು ವಿಚಾರಣೆ ನಡೆಸಿದಾಗ ‘ಅವರು ಸ್ಥಳೀಯ ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ ಅದಕ್ಕೆ ಚೀಸ್ ಹರಡಲು ಬೇಕರಿಯಿಂದ ಚಾಕುವನ್ನು ಪಡೆದಿದ್ದು, ನಂತರ ಚಾಕುವನ್ನು ಬೇಕರಿಗೆ ಹಿಂತಿರುಗಿಸಲು ಹೋಗಿರುವುದಾಗಿ ಹಾಗೂ ತಾವುಗಳು ಯಾವುದೇ ಅಪರಾಧಿಕ ಕೃತ್ಯದಲ್ಲಿ ತೊಡಗಿರುವುದಿಲ್ಲ ಮತ್ತು ಆ ಬಳಿಕ ದೈನಂದಿನಂತೆ ಜಿಮ್ ಗೆ ತೆರಳಿರುವುದಾಗಿ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ತಿಳಿದಿದ್ದರೂ ಕೂಡಾ ದ್ವೇಷಭಾವನೆಯಿಂದ ಹಿಂದೂ ಸಂಘಟನೆ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಎಂಬವರು ದುರುದ್ದೇಶಪೂರ್ವಕವಾಗಿ ಯುವತಿಯ ಮೂಲಕ ಪ್ರಕರಣ ದಾಖಲಿಸಲು ಯತ್ನಿಸುತ್ತಿರುವುದಾಗಿ ಯುವಕರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವೆಬ್ ನ್ಯೂಸ್‌ಗಳ ವಿರುದ್ಧ ಪ್ರಕರಣ ದಾಖಲು
ಮೇಲಿನ ಘಟನೆಗೆ ಸಂಬಂಧಿಸಿದಂತೆ ಕೆಲ ವೆಬ್ ನ್ಯೂಸ್ ಗಳು ಸತ್ಯ ಘಟನೆಯನ್ನು ಪ್ರಸಾರ ಮಾಡದೇ ಹಿಂದೂ-ಮುಸ್ಲಿಂ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ರೀತಿಯಲ್ಲಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


