ಬಂಟ್ವಾಳ,ಜೂನ್.13: ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ಚರ್ಚ್‌ನ ಪಾಲಕ ಸಂತರಾದ ಸಂತ ಅಂತೋನಿಯವರ ವಾರ್ಷಿಕ ಹಬ್ಬವನ್ನು ಜೂನ್ 13 ಶನಿವಾರ ರಂದು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ನಡೆದ ಮಹಾ ಪವಿತ್ರ ಬಲಿಪೂಜೆ ಯನ್ನು ಬೆಂದೂರ್ ಸಂತ ಸೆಬಾಸ್ಟಿಯನ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಾಲ್ಟರ್ ಡಿಸೋಜಾ ವಹಿಸಿದ್ದರು. ಪ್ರವಚನ ನೀಡಿದ ಅವರು, “ನಾವು ಮಾಡುವ ದಾನ, ಧರ್ಮ ಮತ್ತು ಒಳ್ಳೆಯ ಕೆಲಸಗಳು ಪ್ರಚಾರಕ್ಕಾಗಿ ಇರಬಾರದು. ನಿಜವಾದ ದಾನವು ಹೃದಯದ ಆಳದಿಂದ ಬರಬೇಕು. ಯಾವುದೇ ಪ್ರಚಾರವಿಲ್ಲದೆ ಗುಪ್ತವಾಗಿ ಮಾಡುವ ಪ್ರೀತಿಯ ಸೇವೆಗಳನ್ನು ದೇವರು ಸದಾ ಮೆಚ್ಚುತ್ತಾನೆ” ಎಂದು ಭಕ್ತರಿಗೆ ಕರೆ ನೀಡಿದರು.
ಬಲಿಪೂಜೆಯಲ್ಲಿ ಸುತ್ತಮುತ್ತಲಿನ ಚರ್ಚ್‌ಗಳ ಆಮಂತ್ರಿತ 17 ಜನ ಧರ್ಮಗುರುಗಳು ಬಲಿಪೂಜೆಯಲ್ಲಿ ಸಹಭಾಗಿಗಳಾಗಿದ್ದರು. ಚರ್ಚ್‌ನ ಭಕ್ತಾದಿಗಳು ಪೂಜೆಯ ಪ್ರಾರ್ಥನಾ ವಿಧಿಗಳನ್ನು ಬಹಳ ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಬಲಿಪೂಜೆಯ ನಂತರ ಚರ್ಚ್ ಆವರಣದಲ್ಲಿ ಸಂತ ಅಂತೋನಿಯವರ ಭವ್ಯ ಮೆರವಣಿಗೆ ನಡೆಯಿತು. ಭಕ್ತರು ಭಕ್ತಿಗೀತೆಗಳನ್ನು ಹಾಡುತ್ತಾ ಪ್ರಾರ್ಥನೆ ಸಲ್ಲಿಸಿದರು. ಆರಂಭದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಹಬ್ಬದ ಸಂಭ್ರಮದ ಅಂಗವಾಗಿ ಭಕ್ತರೆಲ್ಲರಿಗೂ ಜಂಟಿ ಪ್ರೀತಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬಂಟ್ವಾಳ ವಲಯದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಿಕ್ಟರ್ ಡಿಸೋಜಾ ಅವರು ಈ ಭೋಜನ ಕೂಟದಲ್ಲಿ ಭಾಗವಹಿಸಿ ಹರಸಿದರು. ಚರ್ಚ್‌ನ ಎಲ್ಲಾ ಭಕ್ತರು ಒಟ್ಟಾಗಿ ಊಟ ಸವಿಯುವ ಮೂಲಕ ಕ್ರೈಸ್ತ ಬಾಂಧವ್ಯ ಮತ್ತು ಏಕತೆಯನ್ನು ಪ್ರದರ್ಶಿಸಿದರು. ನೂರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಹಬ್ಬದ ಆಚರಣೆಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.