canaratvnews

ಮಂಗಳೂರು ಪೊಲೀಸರ ಹೆಸರಲ್ಲೇ ನಕಲಿ ವೆಬ್‌ಸೈಟ್….!

ಮಂಗಳೂರು: ಪೊಲೀಸ್ ಇಲಾಖೆಯ ಹೆಸರನ್ನೇ ಬಳಸಿಕೊಂಡು ಸೈಬರ್ ವಂಚಕರು ನಕಲಿ ವೆಬ್‌ಸೈಟ್ ಸೃಷ್ಟಿಸಿ ಆನ್‌ಲೈನ್ ಜೂಜಾಟ ನಡೆಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ನಗರದ ಸೈಬರ್ ಕ್ರೈಂ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರೇವಣ ಸಿದ್ದಪ್ಪ ಅವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಿನಾಂಕ 25-03-2026ರಂದು ಸಂಜೆ ಸೈಬರ್ ವಿಭಾಗದ ಅಧಿಕಾರಿಗಳು ಗೂಗಲ್ ಪರಿಶೀಲಿಸುತ್ತಿದ್ದಾಗ, ‘ಮಂಗಳೂರು ಸಿಟಿ ಪೊಲೀಸ್’ ಹೆಸರಿನಲ್ಲಿ ನಕಲಿ ವೆಬ್‌ಸೈಟ್ (https://mangalorecitypolice.com/) ಇರುವುದು ಕಂಡುಬಂದಿದೆ. ಅಮಾಯಕ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರನ್ನು ನಂಬಿಸಿ, ಅವರಿಂದ ಹಣ ಲೂಟಿ ಮಾಡುವ ದುರುದ್ದೇಶದಿಂದ ಈ ಜಾಲತಾಣವನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ನಕಲಿ ವೆಬ್‌ಸೈಟ್‌ನಲ್ಲಿ ಕೇವಲ ಮಾಹಿತಿ ಮಾತ್ರವಲ್ಲದೆ, ಅಪಾಯಕಾರಿ ಆನ್‌ಲೈನ್ ಗ್ಯಾಂಬ್ಲಿಂಗ್ (ಜೂಜಾಟ) ಗೇಮ್‌ಗಳನ್ನು ಅಳವಡಿಸಲಾಗಿದೆ.

ಪ್ರಮುಖ ಗೇಮ್‌ಗಳು: ‘ಗೇಟ್ಸ್ ಆಫ್ ಒಲಿಂಪಸ್’, ‘ಮಾಜಾಂಗ್ ವಿನ್ಸ್ 3’, ‘ಸ್ಟಾರ್ ಲೈಟ್ ಪ್ರಿನ್ಸೆಸ್ 1000’, ‘ಸ್ವೀಟ್ ಬೊನಾಂಜಾ’, ‘ಪೋಕರ್ ಒಮಾಹ’ ಸೇರಿದಂತೆ ನೂರಾರು ಜಾಕ್‌ಪಾಟ್ ಆಟಗಳು ಈ ಸೈಟ್‌ನಲ್ಲಿವೆ. ‘ಮಲ್ಟಿ ಸ್ಕ್ಯಾಟರ್ ಪ್ರಾಗ್ಮ್ಯಾಟಿಕ್’ ಎಂಬ ಹೆಸರಿನಡಿ ಈ ಆಟಗಳನ್ನು ಆಡಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಮೋಸದಿಂದ ವರ್ಗಾಯಿಸಿಕೊಳ್ಳುವ ಸಂಚು ರೂಪಿಸಲಾಗಿದೆ.
ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚನೆ ಎಸಗುತ್ತಿರುವ ಅಪರಿಚಿತ ವ್ಯಕ್ತಿಗಳು ಹಾಗೂ ನಕಲಿ ವೆಬ್‌ಸೈಟ್ ಸೃಷ್ಟಿಕರ್ತರ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳನ್ನು ಹೊರತುಪಡಿಸಿ, ಇಂತಹ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಅದರಲ್ಲೂ ಹಣದ ಆಮಿಷ ಒಡ್ಡುವ ಆನ್‌ಲೈನ್ ಜೂಜಾಟದ ಸೈಟ್‌ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.

Share News
Exit mobile version