ಮಂಗಳೂರು: ನಗರದ ಎಕ್ಕೂರು ಅಯ್ಯಪ್ಪ ಭಜನಾ ಮಂದಿರದ ಹಿಂಭಾಗದ ಮನೆಗಳು ಎದುರಿಸುತ್ತಿರುವ ಒಳಚರಂಡಿ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸ ಲಾಗುವುದು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ.

ಸಮಸ್ಯೆ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಇತ್ತೀಚೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಕುಡ್ಸೆಂಪ್ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ಜಂಟಿ ಸಭೆ ನಡೆಯಿತು.
ಸ್ಥಳೀಯರ ಪರವಾಗಿ ಮಾತನಾಡಿದ ಎಕ್ಕೂರು ನಿವಾಸಿ ತನುಜಾ ಅವರು, “ಡ್ರೈನೇಜ್ ವ್ಯವಸ್ಥೆಯ ಲೋಪದಿಂದಾಗಿ ಇಲ್ಲಿನ ಹತ್ತಾರು ಮನೆಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ನಿತ್ಯದ ಬದುಕು ದುಸ್ತರವಾಗಿದೆ,” ಎಂದು ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು.

ಸಮಸ್ಯೆಯ ತೀವ್ರತೆಯನ್ನು ಅರಿತು ತಕ್ಷಣ ಸ್ಪಂದಿಸಿದ ಶಾಸಕ ವೇದವ್ಯಾಸ ಕಾಮತ್ ಅವರು, ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು. ಅಲ್ಲದೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ವಿಸ್ತೃತ ವರದಿ ತಯಾರಿಸಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ನರೇಶ್ ಶೆಣೈ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಲಿಂಗಪ್ಪ, ಸಹಾಯಕ ಇಂಜಿನಿಯರ್ ಪ್ರಿಯಾಂಕ, ಕುಡ್ಸೆಂಪ್ ಅಧಿಕಾರಿಗಳಾದ ಜಯಪ್ರಕಾಶ್, ಸುರೇಶ್, ಶಿವರಾಮ್, ಸಂಪತ್ ಹಾಗೂ ವೆಂಕಟರಮಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
