ಮಂಗಳೂರು, ಮೇ 28: ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಮತ್ತು ಹಯತುಲ್ ಇಸ್ಲಾಂ ಮದರಸದ ಆಶ್ರಯದಲ್ಲಿ ಈದುಲ್ ಅಳ್ಹಾ (ಬಕ್ರೀದ್) ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸೌಹಾರ್ದತೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಖತೀಬರಾದ ಅಬ್ದುಲ್ ನಾಸಿರ್ ಸಅದಿ ಅವರು, “ಯಾರೂ ಯಾರೊಂದಿಗೂ ದ್ವೇಷ ಸಾಧಿಸದೆ, ಪರಸ್ಪರ ಕಚ್ಚಾಡದೆ ಒಗ್ಗಟ್ಟಿನಿಂದ ಬಾಳಬೇಕು. ಎಂತಹದ್ದೇ ಕಠಿಣ ಪರಿಸ್ಥಿತಿಗಳು ಎದುರಾದರೂ ಅಲ್ಲಾಹನು ನೀಡಿದ ಅನುಗ್ರಹಗಳನ್ನು ಮರೆಯದೆ ಕೃತಜ್ಞತೆ ಸಲ್ಲಿಸಬೇಕು. ಸದಾ ಕಾಲ ದೇವನಿಗೆ ತಲೆಬಾಗಿ ಇಹಪರ ವಿಜಯಿಗಳಾಗಲು ಪ್ರಯತ್ನಿಸಬೇಕು” ಎಂದು ಹಿತವಚನ ನೀಡಿದರು.
ಬಳಿಕ ಸದರ್ ಮುಅಲ್ಲಿಮರಾದ ಅಬ್ದುಲ್ ಹಕೀಂ ಮದನಿ ಅವರು ಈದ್ ನಮಾಜು ಹಾಗೂ ಖುತುಬಾ ನೇತೃತ್ವ ವಹಿಸಿದರು. ನಂತರ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಪರಸ್ಪರ ಹಸ್ತಲಾಂಘನದೊಂದಿಗೆ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಉಪಾಧ್ಯಕ್ಷರಾದ ಅಶ್ರಫ್ ಕೆ.ಇ., ಎಚ್.ಎಸ್. ಹನೀಫ್, ಬಿ.ಎನ್. ಅಬ್ಬಾಸ್, ಕಾರ್ಯದರ್ಶಿ ಅಬ್ದುಲ್ ಹಮೀದ್, ಪ್ರಮುಖರಾದ ನಝೀರ್ ಬಜಾಲ್, ಯೂಸುಫ್, ಹನೀಫ್ ಕೆಳಗಿನ ಮನೆ, ನಝೀರ್ ಪಾಂಡೆಲ್, ಯು.ಪಿ. ವಾಸಿಂ, ಬದ್ರುಲ್ ಮುನೀರ್ ಎಚ್.ಎಸ್., ರಹಿಮಾನ್ ಮದನಿ ಹಾಗೂ ಜಮಾತ್ ಸದಸ್ಯರು ಉಪಸ್ಥಿತರಿದ್ದರು