LATEST NEWS

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸೌಹಾರ್ದತೆಯ ದೀಪಾವಳಿ; ಸರ್ವ ಧರ್ಮದ ಮುಖಂಡರಿಂದ ಭಾವೈಕ್ಯತೆಯ ಹಣತೆ ಬೆಳಗುವಿಕೆ.

ಮಂಗಳೂರು: ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಮರಸ್ಯದೊಂದಿಗೆ ಆಚರಿಸಲಾಯಿತು. ಸರ್ವ ಧರ್ಮಗಳ ನಾಯಕರು ಹಾಗೂ ಕಾರ್ಯಕರ್ತರು ಒಗ್ಗೂಡಿ ಹಣತೆ ಬೆಳಗಿಸುವ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಸಾರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಮಹಿಳಾ ನಾಯಕಿಯರು ಭಾಗವಹಿಸಿದ್ದರು. ಕಚೇರಿ ಆವರಣವನ್ನು ಸಾಂಪ್ರದಾಯಿಕ ಹಣತೆಗಳಿಂದ ಕಣ್ಮನ ಸೆಳೆಯುವಂತೆ ಸಿಂಗರಿಸಲಾಗಿತ್ತು.

ಕೋಮುವಾದಿ ರಾಜಕೀಯಕ್ಕೆ ಸೌಹಾರ್ದತೆಯ ಉತ್ತರ:

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, “ಸಮಾಜವನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ವಿಭಜಿಸುವ ಕೋಮುವಾದಿ ರಾಜಕೀಯಕ್ಕೆ ಈ ಸೌಹಾರ್ದದ ಆಚರಣೆ ಸೂಕ್ತ ಉತ್ತರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಮತ್ತು ಸಾಮರಸ್ಯದ ಪರಂಪರೆಯನ್ನು ಎತ್ತಿಹಿಡಿಯುವುದು ಹಾಗೂ ಎಲ್ಲಾ ಸಮುದಾಯಗಳನ್ನು ಪ್ರೀತಿ-ವಿಶ್ವಾಸದಿಂದ ಒಗ್ಗೂಡಿಸಿ ಮುನ್ನಡೆಯುವುದೇ ಈ ಆಚರಣೆಯ ಮೂಲ ಉದ್ದೇಶ” ಎಂದು ಹೇಳಿದರು.

ಇಂದಿರಾ ಗಾಂಧಿ ಆದರ್ಶದ ಸ್ಮರಣೆ:

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, “ದೇಶವನ್ನು ಮುನ್ನಡೆಸಿದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಜವಾಬ್ದಾರಿಗಳ ನಡುವೆಯೂ ಬಿಡುವು ಮಾಡಿಕೊಂಡು ದೀಪಾವಳಿ ಹಬ್ಬವನ್ನು ತಮ್ಮ ಕುಟುಂಬ ಹಾಗೂ ಪಕ್ಷದ ಪದಾಧಿಕಾರಿಗಳೊಂದಿಗೆ ಪ್ರೀತಿಯಿಂದ ಆಚರಿಸುತ್ತಿದ್ದರು. ಅದೇ ಆದರ್ಶವನ್ನು ಸ್ಮರಿಸುತ್ತಾ, ಇಂದು ನಮ್ಮ ಎಲ್ಲಾ ಮುಖಂಡರು, ಮಹಿಳಾ ನಾಯಕಿಯರು ಹಾಗೂ ಸರ್ವ ಧರ್ಮದ ಕಾಂಗ್ರೆಸ್ ಬಂಧುಗಳು ಒಂದೇ ಕುಟುಂಬದಂತೆ ಇಲ್ಲಿ ಸೇರಿ ದೀಪಾವಳಿ ಆಚರಿಸಿರುವುದು ಅರ್ಥಪೂರ್ಣವಾಗಿದೆ” ಎಂದು ಸ್ಮರಿಸಿದರು.

ಎಲ್ಲಾ ಜಾತಿ-ಧರ್ಮಗಳ ಮುಖಂಡರು ಹಾಗೂ ಕಾರ್ಯಕರ್ತರು ಒಂದೆಡೆ ಸೇರಿ ದೀಪಗಳನ್ನು ಬೆಳಗಿಸಿ, ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯ ಕಚೇರಿಯಲ್ಲಿ ನಿಜವಾದ ಭಾವೈಕ್ಯತೆಯ ವಾತಾವರಣವನ್ನು ಸೃಷ್ಟಿಸಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಸದಸ್ಯರು, ಪಕ್ಷದ ಪ್ರಮುಖ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ನಾಯಕರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಈ ಸಂಭ್ರಮದಲ್ಲಿ ಉಪಸ್ಥಿತರಿದ್ದರು.

Share News