LATEST NEWS

ಪಾಕ ಪ್ರವೀಣ ವೆಂಕಟೇಶ್ ಪಾವಂಜೆ ಅವರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವ

ಮಂಗಳೂರು: ಪಾಕಶಾಸ್ತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ, ಕರಾವಳಿಯುದ್ದಕ್ಕೂ “ನಳಪಾಕ” ಎಂದೇ ಖ್ಯಾತರಾಗಿರುವ ವೆಂಕಟೇಶ್ ಪಾವಂಜೆ ಅವರಿಗೆ ಪಾಕಶಾಸ್ತ್ರ ಕ್ಷೇತ್ರದ ವಿಶೇಷ ಸಾಧನೆಗಾಗಿ 2026 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪಾಕಶಾಸ್ತ್ರದಲ್ಲಿ ಅಪಾರ ಅನುಭವ, ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವವನ್ನು ಹೊಂದಿರುವ ವೆಂಕಟೇಶ್ ಪಾವಂಜೆ ಅವರು ಈ ಕ್ಷೇತ್ರದಲ್ಲಿ ದೀರ್ಘಕಾಲದಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಹಾಗೂ ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವು ಪ್ರಸಿದ್ಧ ದೇವಾಲಯಗಳ ಬ್ರಹ್ಮಕಲಶೋತ್ಸವ, ನಾಗಮಂಡಲ ಹಾಗೂ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.

ಈ ಬೃಹತ್ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ಸಾಂಪ್ರದಾಯಿಕ ಶೈಲಿಯ ವಿಶಿಷ್ಟ ಪಾಕವಿಧಾನದ ಮೂಲಕ ಅತ್ಯಂತ ಶ್ರದ್ಧೆ, ಶುಚಿತ್ವ ಹಾಗೂ ಭಕ್ತಿಭಾವದಿಂದ ಅನ್ನಪ್ರಸಾದವನ್ನು ಸಿದ್ಧಪಡಿಸಿ, ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗಿದ್ದಾರೆ. ಇವರ ಈ ಅಪೂರ್ವ ಸಾಧನೆ ಮತ್ತು ಜನಪರ ಸೇವೆಯನ್ನು ಗುರುತಿಸಿ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವೆಂಕಟೇಶ್ ಪಾವಂಜೆ ಅವರ ಈ ಸಾಧನೆಗೆ ಸಾರ್ವಜನಿಕ ವಲಯ ಹಾಗೂ ಭಕ್ತಾದಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Share News