LATEST NEWS

MRPL, MSEZ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹ: ಸಂಸದ ಬ್ರಿಜೇಶ್ ಚೌಟ ಅವರಿಗೆ ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಮನವಿ

ಮಂಗಳೂರು: ಮಂಗಳೂರಿನ ಎಂಆರ್‌ಪಿಎಲ್ (MRPL) ಹಾಗೂ ಎಂಎಸ್‌ಇಜೆಡ್ (MSEZ) ಸಂಸ್ಥೆಗಳಿಂದ ಸ್ಥಳೀಯವಾಗಿ ಉಂಟಾಗುತ್ತಿರುವ ನಾನಾ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಂತೆ ಆಗ್ರಹಿಸಿ “ಎಂ. ಆರ್. ಪಿ.ಎಲ್ – ಎಂ.ಎಸ್. ಇ. ಝಡ್ ಗುತ್ತಿಗೆ ಕಾರ್ಮಿಕರ ಹಾಗೂ ಸಂತ್ರಸ್ತರ ಹೋರಾಟ ಸಮಿತಿ” ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.

ಹೋರಾಟ ಸಮಿತಿಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರ ನೇತೃತ್ವದಲ್ಲಿ ಸಂಸದರನ್ನು ಭೇಟಿಯಾದ ನಿಯೋಗವು, ಸ್ಥಳೀಯ ಸಂತ್ರಸ್ತರು ಹಾಗೂ ಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ತೊಂದರೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಜ್ಞಾಪನಾ ಪತ್ರವನ್ನು ಹಸ್ತಾಂತರಿಸಿತು.

ಅಕ್ಟೋಬರ್ 31ರೊಳಗೆ ಸ್ಪಂದಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಸಮಿತಿಯು ನೀಡಿರುವ ಬೇಡಿಕೆಗಳಿಗೆ ಬರುವ ಅಕ್ಟೋಬರ್ 31ರ ಒಳಗಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಸೂಕ್ತವಾಗಿ ಸ್ಪಂದಿಸಬೇಕು. ಒಂದು ವೇಳೆ ನಿಗದಿತ ಕಾಲಮಿತಿಯೊಳಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ಮುಂಬರುವ ದಿನಗಳಲ್ಲಿ ಸಂಸ್ಥೆಗಳ ವಿರುದ್ಧ ತೀವ್ರ ಸ್ವರೂಪದ ಬೃಹತ್ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೋರಾಟ ಸಮಿತಿಯು ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಉಭಯ ಸಂಸ್ಥೆಗಳಿಗೆ ಗಂಭೀರ ಎಚ್ಚರಿಕೆ ನೀಡಿದೆ.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖ ಪದಾಧಿಕಾರಿಗಳು ಹಾಗೂ ಬಾಧಿತ ಗುತ್ತಿಗೆ ಕಾರ್ಮಿಕರು, ಸ್ಥಳೀಯ ಸಂತ್ರಸ್ತರು ಉಪಸ್ಥಿತರಿದ್ದರು.

Share News