ಮಂಗಳೂರು: ರಾಜ್ಯದ ಕರಾವಳಿ ಹಾಗೂ ಇಡೀ ರಾಜ್ಯದ ಕ್ಯಾಥೊಲಿಕ್ ಕ್ರೈಸ್ತ ಬಾಂಧವರು ಅನಾದಿಕಾಲದಿಂದಲೂ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ವಿಶೇಷ ಕುಟುಂಬ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಗೆ ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಕೆಥೋಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಘಟಕಗಳ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಘಟಕದ ರಾಜಕೀಯ ಸಂಚಾಲಕ ಹಾಗೂ ಮಾಜಿ ಅಧ್ಯಕ್ಷ ಸ್ಪ್ಯಾನಿ ಲೋಬೊ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಮತ್ತು ಉಡುಪಿ ವಲಯ ಅಧ್ಯಕ್ಷ ಕಿರಣ್ ಲೂವಿಸ್ ಒಳಗೊಂಡ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಅಧಿಕೃತ ವಿನಂತಿ ಸಲ್ಲಿಸಿತು.
ಸೆಪ್ಟೆಂಬರ್ 8 ರಂದು ದೇವಮಾತೆ ಕನ್ಯಾಮರಿಯಮ್ಮನವರ ಜನ್ಮದಿನವಾಗಿದ್ದು, ಅದೇ ದಿನ ಕರಾವಳಿಯ ಕ್ರೈಸ್ತ ಬಾಂಧವರು ‘ತೆನೆ ಹಬ್ಬ’ವನ್ನಾಗಿ ಅತ್ಯಂತ ಭಕ್ತಿಯಿಂದ ಆಚರಿಸುತ್ತಾರೆ. ಈ ದಿನದಂದು ರೈತರು ತಾವು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ, ಚರ್ಚ್‌ಗಳಲ್ಲಿ ವಿಶೇಷ ಪೂಜಾವಿಧಿಗಳನ್ನು ನೆರವೇರಿಸುತ್ತಾರೆ. ಬಳಿಕ ಕುಟುಂಬದವರೆಲ್ಲರೂ ಒಟ್ಟಾಗಿ ಸಹಭೋಜನ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ದಿನದಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸಾರ್ವತ್ರಿಕ ರಜೆ ನೀಡಬೇಕೆಂದು ನಿಯೋಗವು ಒತ್ತಾಯಿಸಿದೆ.
