ಮಂಗಳೂರು: ಪ್ರವಾದಿ ಮುಹಮ್ಮದ್ ಮುಸ್ತಫಾ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಅವರ 1501ನೇ ಮೀಲಾದುನ್ನಬೀ (ಸ) ಪ್ರಯುಕ್ತ ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ, ಫೈಸಲ್ ನಗರ ನಮಾಉಲ್ ಇಸ್ಲಾಂ ಮದ್ರಸ ಹಾಗೂ ಶಾಂತಿನಗರ ತರ್ಬಿಯತುಲ್ ಇಸ್ಲಾಂ ಕಮಿಟಿ ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ಮೀಲಾದ್ ರ‍್ಯಾಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ನಾಸಿರ್ ಸಅದಿ ಅವರು ದುಆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ರವೂಫ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ರ‍್ಯಾಲಿಗೆ ಅಧಿಕೃತ ಚಾಲನೆ ನೀಡಿದರು.

ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ ವಠಾರದಿಂದ ಆರಂಭಗೊಂಡ ರ‍್ಯಾಲಿಯು ಫೈಸಲ್ ನಗರ, ಶಾಂತಿನಗರ ಮತ್ತು ಪಾಂಡೇಲ್ ಮಾರ್ಗವಾಗಿ ಸಾಗಿತು. ರ‍್ಯಾಲಿಯುದ್ದಕ್ಕೂ ಆಕರ್ಷಕ ದಫ್ ಪ್ರದರ್ಶನ, ಸ್ಕೌಟ್ ಮತ್ತು ಫ್ಲವರ್ ಶೋಗಳು ಜನರ ಗಮನ ಸೆಳೆದವು. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಸಿಹಿ ತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ರ‍್ಯಾಲಿಯ ಮುಕ್ತಾಯದಲ್ಲಿ ಸಾಮೂಹಿಕ ದುಆ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ ಸದರ್ ಉಸ್ತಾದ್ ಅಬ್ದುಲ್ ಹಕೀಂ ಮದನಿ, ಗೌಸಿಯಾ ಜುಮಾ ಮಸೀದಿ ಖತೀಬರಾದ ಇಕ್ಬಾಲ್ ನಿಝಾಮಿ, ತರ್ಬಿಯತುಲ್ ಇಸ್ಲಾಂ ಕಮಿಟಿ ಇಮಾಮರಾದ ಮಿಖ್ದಾದ್ ಹಾಶಿಮಿ, ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಉಪಾಧ್ಯಕ್ಷರಾದ ಅಶ್ರಫ್ ಕರಿಬೊಟ್ಪು, ಹನೀಫ್ ಹಾಜಿ ಉಪಸ್ಥಿತರಿದ್ದರು.

ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಾಜಿ ಕಾರ್ಯದರ್ಶಿ ಪೊಡಿಯಾಕ, ಕೋಶಾಧಿಕಾರಿ ನಝೀರ್ ಪಾಂಡೇಲ್, ಉಸ್ತುವಾರಕರಾದ ನಝೀರ್ ಬಜಾಲ್, ಅಶ್ರಫ್ ತೋಟ, ಗೌಸಿಯಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ, ಬದ್ರಿಯಾ ಜುಮಾ ಮಸೀದಿ ಜೊತೆ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಕೆಳಗಿನ ಮನೆ, ಸದಸ್ಯರಾದ ಇಕ್ಬಾಲ್ ಅಹ್ಸನಿ, ಯೂಸುಫ್ ಕುಂಬ್ಳಲಿಕೆ ಸೇರಿದಂತೆ ವಿವಿಧ ಮದ್ರಸಾಗಳ ಅಧ್ಯಕ್ಷರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.




