ಬೆಂಗಳೂರು: ತಂದೆಯ ಆಸ್ತಿಗಾಗಿ 73ರ ವರ್ಷದ ವೃದ್ಧ ತಾಯಿಯ ಮೇಲೆ ಪುತ್ರಿಯೇ ದೂರು ದಾಖಲಿಸಿ ಕಿರುಕುಳ ನೀಡುವುದರ ವಿರುದ್ಧ ಗರಂ ಆದ ಹೈಕೋರ್ಟ್ ತಾಯಿ ಮೇಲಿನ ಕೇಸು ರದ್ದುಪಡಿಸಿ ಕುಟುಂಬವೊಂದರ ಮೇಲೆ ಒತ್ತಡ ಹೇರುವ ಅಸ್ತ್ರವಾಗಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬಳಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ
73 ವರ್ಷದ ವೃದ್ದೆಯೊಬ್ಬರು ಪತಿಯ ನಿಧನಾನಂತರ ಬೆಂಗಳೂರಿನಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದಾರೆ. ಮೊದಲ ಪುತ್ರಿ ಬೆಂಗಳೂರಿನ ಮತ್ತೊಂದು ಪ್ರದೇಶದಲ್ಲಿ ಹಾಗೂ ಎರಡನೇ ಪುತ್ರಿ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಅರ್ಜಿದಾರರ ಪತಿಯ ಕೋಟ್ಯಂತರ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಯ ಪಾಲು ದಾವೆ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದೆ. ಸಿಂಗಾಪುರದಲ್ಲಿರುವ ಕಿರಿಯ ಪುತ್ರಿ, ತಾಯಿಯು ತನಗೆ ದಕ್ಕಬೇಕಾದ ಆಸ್ತಿಯ ದಾಖಲೆ ತಿರುಚಿ ವಂಚನೆ ಮಾಡುತ್ತಿದ್ದಾರೆಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?
ತನ್ನ ಮತ್ತು ತನ್ನ ಹಿರಿಯ ಪುತ್ರಿ ವಿರುದ್ಧ ಕಿರಿಯ ಪುತ್ರಿ ದಾಖಲು ಮಾಡಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಬೆಂಗಳೂರಿನ 73 ವರ್ಷದ ಮಹಿಳೆಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು “ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಬಲವಂತವಾಗಿ ತನ್ನ ತಾಯಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರಿಗೆ ತೊಂದರೆ ಕೊಡುತ್ತಿರುವುದು ಸರ್ವಥಾ ಸಮರ್ಥನೀಯವಲ್ಲ. ಒಂದು ವೇಳೆ ಕಿರಿಯ ಮಗಳು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಿದ್ದಾರೆ ಎಂದಾದರೆ, ಕಾನೂನು ಈಗಾಗಲೇ ಅವರಿಗೆ ಸೂಕ್ತವಾದ ಮಾರ್ಗವನ್ನು ಒದಗಿಸಿದೆ ಮತ್ತು ಅದನ್ನು ಅವರು ಸಿವಿಲ್ ದಾವೆಯ ಮುಖಾಂತರವೇ ಪಡೆಯಲಿ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಿರುದ್ಧದ ಪ್ರಕರಣ ರದ್ದು
73 ವರ್ಷದ ತಾಯಿಯನ್ನು ಅನಗತ್ಯ ಕ್ರಿಮಿನಲ್ ಮೊಕದ್ದಮೆಗೆ ಗುರಿಪಡಿಸಲು ಪೊಲೀಸರ ಸಹಾಯವನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ, ಕುಟುಂಬವೊಂದರ ಮೇಲೆ ಒತ್ತಡ ಹೇರುವ ಅಸ್ತ್ರವಾಗಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬಳಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
