canaratvnews

ಮಡಂತ್ಯಾರಿನಲ್ಲಿ ಬಾಲ್ಯವಿವಾಹಕ್ಕೆ ತಡೆ

ಬೆಳ್ತಂಗಡಿ: ಇಲ್ಲಿನ ಮಡಂತ್ಯಾರಿನಲ್ಲಿ ಬಾಲ್ಯವಿವಾಹ ನಡೆಯುವ ಸಂದರ್ಭದಲ್ಲಿ ಮಂಗಳೂರು ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಯ ನೇತೃತ್ವದಲ್ಲಿ ತಡೆಗಟ್ಟಿದ ಘಟನೆ ಫೆ.8 ರಂದು ನಡೆಯಿತು.

ಕಳಿಯ ಗ್ರಾಮದ ಜನತಾ ಕಾಲೋನಿ ನಿವಾಸಿ ಅಸ್ಮಾ ಮತ್ತು ಆಶ್ರಫ್ ದಂಪತಿಗಳ ಪುತ್ರಿಯ ಮದುವೆ ಹಮ್ಮಿಕೊಂಡಿದ್ದರು. ಅದರಂತೆ ಮಸೀದಿಯಲ್ಲಿ ಮದುವೆ ನಡೆಸಲು ತಯಾರಿ ನಡೆದಿದೆ. ಮದುವೆಯಾಗುವ ಹುಡುಗಿಗೆ 18 ವರ್ಷ ಪೂರ್ಣ ಅಗದಿರುವ ಬಗ್ಗೆ ಮಂಗಳೂರು ಮಕ್ಕಳ ರಕ್ಷಣಾ ಇಲಾಖೆಗೆ ಮಾಹಿತಿ ತಿಳಿಯಿತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಿದ್ದಾರೆ.

ಹುಡುಗಿ ಅಧಾರ ಕಾರ್ಡ್ ನಲ್ಲಿ ಜ.17.2008 ಎಂದು ಇದ್ದರೆ ಜನನ ಪತ್ರ ಮತ್ತು ಶಾಲಾ ದಾಖಲೆಯಲ್ಲಿ ಎ.17.2008. ಮೂರು ತಿಂಗಳ ವ್ಯತ್ಯಾಸ ಹೊಂದಿದೆ ಎಂದು ಅಧಿಕಾರಿಗಳು ಹೇಳಿದಾಗ ಮದುವೆ ಮನೆಯವರು ಅಧಿಕಾರಿಗಳಿಗೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಗೇರುಕಟ್ಟೆ ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಈಶ್ವರಿ ಕೆ.ಅವರನ್ನು ಕರೆಯಿಸಿ ಶಾಲಾ ದಾಖಲೆಯನ್ನು ಪರಿಶೀಲನೆ ನಡೆಸಿ, ಬಾಲಕಿಯ ಮದುವೆ ವಯಸ್ಸಿಗೆ ಮೂರು ತಿಂಗಳ ಕಾಲ ಇದೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಅಧಿಕಾರಿಗಳು ಮದುವೆ ಮನೆಯವರ ಮನವೊಲಿಸಿ ಮುಂದಿನ ಮೂರು ತಿಂಗಳ ನಂತರ ಮದುವೆ ಮಾಡಿಸುವಂತೆ ತಿಳಿಸಿ ಬಾಲ್ಯ ವಿವಾಹವನ್ನು ತಡೆಗಟ್ಟಿದರು.

ಮಂಗಳೂರು ಮಕ್ಕಳ ರಕ್ಷಣಾ ಇಲಾಖೆಯ ಡಿ.ಸಿ.ಪಿ.ಒ.ಯಶೋಧ, ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಧರ್ಮಸ್ಥಳ ವಲಯ ಮೇಲ್ವಿಚಾರಕಿ ಅನ್ನಪೂರ್ಣ, ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಕುಂಞ ಕೆ., ಗೇರುಕಟ್ಟೆ ಸರಕಾರಿ ಪ್ರೌಢಶಾಲಾ ಉಪ ಪ್ರಾಂಶುಪಾಲೆ ಈಶ್ವರಿ ಕೆ., ಬೆಳ್ತಂಗಡಿ ಅರಕ್ಷಕ ಠಾಣೆ ಸಿಬ್ಬಂದಿ ಶ್ವೇತಾ, ಗೇರುಕಟ್ಟೆ ಕಳಿಯ ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ, ಆಶಾ ಕಾರ್ಯಕರ್ತೆ ಸುಭಾಷಿಣಿ ಕೆ. ಹಾಗೂ ಪಂಚಾಯತ್‌ ಸಿಬ್ಬಂದಿ ಮತ್ತಿತರರಿದ್ದರು.

Share News
Exit mobile version