ಬೆಂಗಳೂರು: ‘ತೂಗುಸೇತುವೆಗಳ ಸರದಾರ’, ‘ಸುಳ್ಯದ ವಿಶ್ವೇಶ್ವರಯ್ಯ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಕಳವಳ ಮತ್ತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮುಖ್ಯಮಂತ್ರಿಯವರು, “ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆಯಿಂದ ರಾಜ್ಯವು ಅಪರೂಪದ ತಾಂತ್ರಿಕ ಸಾಧಕನೊಬ್ಬನನ್ನು ಕಳೆದುಕೊಂಡಂತಾಗಿದೆ. ದೇಶದಾದ್ಯಂತ 140ಕ್ಕೂ ಹೆಚ್ಚು ತೂಗುಸೇತುವೆ ಗಳನ್ನು ನಿರ್ಮಿಸಿದ್ದ ಅವರು, ಕಡಿದಾದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಜನರ ಬದುಕನ್ನು ಸುಗಮಗೊಳಿಸಿದ್ದರು” ಎಂದು ಸ್ಮರಿಸಿದ್ದಾರೆ.
“ಅವರ ಈ ನಿಸ್ವಾರ್ಥ ತಂತ್ರಜ್ಞಾನ ಸೇವೆಗೆ ಮನಸೋತ ಗ್ರಾಮಸ್ಥರು ಇವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಎಂದೇ ಕರೆಯುತ್ತಿದ್ದರು. ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


