canaratvnews

ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕರಿಮಣಿ ಎಗರಿಸಿ ಪರಾರಿ: ಗಂಭೀರ ಗಾಯ

ಮಂಗಳೂರು: ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ 70 ವರ್ಷದ ವೃದ್ಧೆಯನ್ನು ದೂಡಿಹಾಕಿ ಕರಿಮಣಿ ಸರವನ್ನು ಎಗರಿಸಿದ ಘಟನೆ ಮೂಡಬಿದ್ರೆಯ ಗುಜ್ಜರಗುಂಡಿ ಬಳಿ ಮಾ.31 ರಂದು ನಡೆದಿದೆ. ಘಟನೆಯಲ್ಲಿ ವೃದ್ದೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ

ಇಂದಿರಾ (70) ಎಂಬುವರು ದಿನಾಂಕ 31-03-2025 ರಂದು ಕೋರಂತಬೆಟ್ಟು ಎಂಬಲ್ಲಿ ತನ್ನ ಅಳಿಯ ಭಾಸ್ಕರ ಎಂಬುವರ ಮನೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿ ಊಟ ಮುಗಿಸಿ ವಾಪಾಸ್ ಮನೆ ಕಡೆಗೆ ಬೆಳುವಾಯಿ – ಕರಿಯನಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು.

ಗುಜ್ಜರಗುಂಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಚಡ್ಡಿ ಮತ್ತು ಹಸಿರು ಬಣ್ಣದ ಶರ್ಟ್ ಧರಿಸಿ ಕೆಂಪು ಬಣ್ಣದ ಮೋಟಾರ್ ಸೈಕಲ್ ನಲ್ಲಿ ಬಂದ ಯುವಕನೊಬ್ಬ ಬೆಳುವಾಯಿಗೆ ಹೋಗುವ ದಾರಿ ಕೇಳಿದ್ದಾನೆ.

ಇಂದಿರಾ  ದಾರಿ ಹೇಳುವಷ್ಟರಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 3-4 ಪವನ್ ತೂಕದ ಕರಿಮಣಿ ಸರವನ್ನು ಹಿಡಿದು ಎಳೆದಿದ್ದಾರೆ. ಈ ವೇಳೆ ಇಂದಿರಾ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನು ವೃದ್ಧೆಯನ್ನು ದೂಡಿಹಾಕಿ ನೆಲಕ್ಕೆ ಬಿದ್ದಾಗ ಕರಿಮಣಿ ಸರವನ್ನು ಕಸಿದುಕೊಂಡು ಬೆಳುವಾಯಿ ಕಡೆಗೆ ಹೋಗಿದ್ದಾನೆ.

ಆತ ದೂಡಿದ ರಭಸಕ್ಕೆ ಇಂದಿರಾ ನೆಲಕ್ಕೆ ಬಿದ್ದು ಎಡಗಾಲಿನ ತೊಡೆಗೆ ಮೂಳೆ ಮುರಿತದ ಗಾಯವಾಗಿ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News
Exit mobile version