COMMUNITY NEWSLATEST NEWS

ಮೊಗರ್ನಾಡ್‌ನಲ್ಲಿ ಕಥೊಲಿಕ್ ಸಭಾ ವಲಯ ಮಟ್ಟದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಸನ್ಮಾನ

ಬಂಟ್ವಾಳ:ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಸಂತ ಜಾನ್ ಪಾವ್ಲ್ ಎರಡನೇ ವಲಯ ಮೊಗರ್ನಾಡ್ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ (Distinction) ಪಡೆದ ವಲಯದ ವಿವಿಧ ಚರ್ಚ್‌ಗಳ 33 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮೊಗರ್ನಾಡ್ ಚರ್ಚ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಅಂಕಗಳ ಜೊತೆಗೆ ಮೌಲ್ಯಯುತ ಜೀವನ ಮುಖ್ಯ: ಫಾ|ಅನಿಲ್ ಡಿಮೆಲ್ಲೊ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೊಗರ್ನಾಡ್ ಎರಡನೇ ಸಂತ ಜಾನ್ ಪಾವ್ಲ್ ವಲಯದ ಧರ್ಮಗುರುಗಳಾದ ಅತೀ ವಂದನೀಯ ಫಾ| ಅನಿಲ್ ಕೆನ್ಯೂಟ್ ಡಿಮೆಲ್ಲೊ ಅವರು, “ವಿದ್ಯಾರ್ಥಿಗಳು ಕಷ್ಟಪಟ್ಟು ಶ್ರಮವಹಿಸಿ ಉತ್ತಮ ಅಂಕ ಗಳಿಸುವ ಮೂಲಕ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಆದರೆ ಕೇವಲ ಅಂಕ ಗಳಿಸಿದರೆ ಮಾತ್ರ ಸಾಲದು, ಅದರೊಂದಿಗೆ ಜೀವನದಲ್ಲಿ ಉತ್ತಮ ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಯಶಸ್ಸು ಸಿಗಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕನಸುಗಳನ್ನು ನನಸಾಗಿಸಲು ಶ್ರಮಿಸಿ:ಫಾ| ಮೈಕಲ್

ವಿಟ್ಲ ಶೋಕಮಾತಾ ದೇವಾಲಯದ ಧರ್ಮಗುರು ಗಳಾದ ವಂದನೀಯ ಫಾ| ಮೈಕಲ್ ಲೋಬೊ ಮಾತನಾಡಿ, “ದೇವರು ಕರುಣಿಸಿದ ಪ್ರತಿಭೆ ಹಾಗೂ ಸ್ವಂತ ಶ್ರಮದಿಂದ ನೀವಿಂದು ಈ ಸಾಧನೆ ಮಾಡಿದ್ದೀರಿ. ಮುಂದಿನ ಜೀವನದಲ್ಲೂ ನಿಮ್ಮ ಕನಸುಗಳನ್ನು ನನಸಾಗಿಸಲು ಇದೇ ರೀತಿಯ ಶ್ರಮ ಮತ್ತು ಬದ್ಧತೆಯನ್ನು ಮುಂದುವರಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮೊಗರ್ನಾಡ್ ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ನೋಯೆಲ್ ಲೋಬೊ ಮಾತನಾಡಿ, “ವಿದ್ಯಾರ್ಥಿಗಳು ಪಡೆದ ಈ ಉತ್ತಮ ಅಂಕಗಳಿಂದ ನಿಮಗಿಂತ ನಿಮ್ಮ ಹೆತ್ತವರು ಹಾಗೂ ಶಿಕ್ಷಕರು ಹೆಚ್ಚು ಸಂಭ್ರಮಿಸಿದ್ದಾರೆ. ತಮಗೆ ದಾರಿದೀಪವಾದ ಹೆತ್ತವರನ್ನು ಮತ್ತು ಶಿಕ್ಷಕರನ್ನು ಜೀವನದಲ್ಲಿ ಎಂದಿಗೂ ಮರೆಯಬಾರದು” ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ವಿಟ್ಲ ಘಟಕ ಹಾಗೂ ಮೊಗರ್ನಾಡು ವಲಯ ಅಧ್ಯಕ್ಷರಾದ ಲೂವಿಸ್ ಮಸ್ಕರೇನ್ಹಸ್ ವಿಟ್ಲ, ಕಥೊಲಿಕ್ ಸಭಾ ಮೊಗರ್ನಾಡ್ ಘಟಕದ ಎಮಿಲ್ಡಾ ಡಿಸೋಜ, ಕಥೊಲಿಕ್ ಸಭಾದ ಕಾರ್ಯದರ್ಶಿ ತೋಮಸ್ ಮಸ್ಕರೇನ್ಹಸ್, ವಲಯ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ರೋಲ್ಫ್ ಡಿಸೋಜ ಮತ್ತು ವಲಯದ ಮಾಜಿ ಅಧ್ಯಕ್ಷರಾದ ಆ್ಯಂಟನಿ ಡಿಸೋಜ ಉಪಸ್ಥಿತರಿದ್ದರು.

ಮೊಗರ್ನಾಡು ವಲಯ ಅಧ್ಯಕ್ಷರಾದ ಲೂವಿಸ್ ಮಸ್ಕರೇನ್ಹಸ್ ವಿಟ್ಲ ಸ್ವಾಗತಿಸಿದರು. ಮನೋಹರ್ ಲ್ಯಾನ್ಸಿ ಡಿಸೋಜ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಎಮಿಲ್ಡಾ ಡಿಸೋಜ ಧನ್ಯವಾದ ಸಮರ್ಪಿಸಿದರು.

Share News